ಜಿಲ್ಲಾ ಸುದ್ದಿ

ಕ್ಯಾನ್ಸರ್ ಪೀಡಿತ ತರುಣಿಗೆ ರಂಜಾನ್ ಉಪವಾಸ ನಿರತ ಯುವಕರ ನೆರವು

Srinivas Rao BV

ಬೆಂಗಳೂರು: ರಂಜಾನ್ ಇಸ್ಲಾಂ ಧರ್ಮೀಯರಿಗೆ  ಹಬ್ಬ ಮಾತ್ರವಲ್ಲ, ಧರ್ಮ ಧರ್ಮಗಳನ್ನು ಬೆಸೆಯುವ ಆಚರಣೆಯೂ ಹೌದು ಎಂಬುದನ್ನು ಬೆನ್ಸನ್ ಟೌನ್ ನ ಹುಡುಗರು ಸಾಬೀತುಪಡಿಸಿದ್ದಾರೆ.

ಉಪವಾಸ ಪೂರ್ಣಗೊಳಿಸುವವರಿಗೆ ತಿನಿಸುಗಳನ್ನು ಮಾರುವ ಮೂಲಕ ಕ್ಯಾನ್ಸರ್ ನಿಂದ ಬಳಲುತ್ತಿರುವ 13 ವರ್ಷದ ಹಿಂದೂ ಬಡ ಬಾಲಕಿಯ ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಬೆನ್ಸನ್ ಟೌನ್ ನ 3 ನೇ ಅಡ್ಡರಸ್ತೆಯಲ್ಲಿನ ಮುಸ್ಲಿಂ ನಿವಾಸಿಗಳು ಬೆಳಿಗ್ಗೆ 5 :30 ಹಾಗೂ ಸಂಜೆ 6 ರ ವೇಳೆಗೆ ಮಸೀದಿಗೆ ಉಪವಾಸ ಆರಂಭಿಸಲು ಹಾಗೂ ಅಂತ್ಯಗೊಳಿಸಲು ತೆರಳುತ್ತಾರೆ. ಮಸೀದಿಯ ಮುಂದೆ ಮಳಿಗೆ ತೆರೆದಿರುವ ಹುಡುಗರು ಇಲ್ಲಿ ತಿನಿಸುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಾರೆ. ಆದರೆ ಹಣವನ್ನು ತಮಗಾಗಿ ಬಳಸದೇ ತಮ್ಮದೇ ಬಡಾವಣೆಯ ಬಾಲಕಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಕೂಡಿಡುತ್ತಿದ್ದಾರೆ.

ನೆರವಿನ ಹಸ್ತ: ಒಂದು ತಿಂಗಳ ಹಿಂದಷ್ಟೆ ಬೆನ್ಸನ್ ಟೌನ್ ನ ಉದ್ಯಮಿ ಖುರಮ್ ಹಾಗೂ ವಿದ್ಯಾರ್ಥಿ ಫೈಸಲ್ ಗೆ ತಮ್ಮ ಪರಿಚಯದವರ ಮಗು ಕ್ಯಾನ್ಸರ್ ಗೆ ಒಳಗಾಗಿರುವುದು ತಿಳಿದಿದೆ. ಬಾಲಕಿಗೆ ಆರ್ಥಿಕ ಸಹಾಯ ಮಾಡುವುದಕ್ಕೆ ನಿರ್ಧರಿಸಿ ಸಾರ್ವಜನಿಕರಿಂದ ದಾನ ಕೇಳಿ ಹಣ ಸಂಗ್ರಹಿಸುವ ಮೂಲಕ ಆರ್ಥಿಕ ಸಹಾಯಕ್ಕೆ ಮುಂದಾದ ಇವರು ಮಸೀದಿಯ ಮುಂದೆ ಸಣ್ಣ ಮಳಿಗೆ ನಿರ್ಮಿಸಿ ಆಹಾರ ತಿನಿಸುಗಳನ್ನು ಮಾರತೊಡಗುತ್ತಾರೆ. ಮುಂಜಾನೆ 5 ಕ್ಕೆ ಎದ್ದು ಸಮೋಸ, ಪರೋಟ, ಚಕ್ಕುಲಿ, ಕಜ್ಜಾಯ, ಪಾನೀಯಗಳನ್ನು ತಯಾರಿಸಿ ಮಳಿಗೆಗೆ ಕೊಂಡೊಯ್ದು ಮಾರುತ್ತಿರುತ್ತಾರೆ. ಇದರಿಂದ ಸಂಗ್ರಹವಾಗುವ ಹಣವನ್ನೇ ಕ್ಯಾನ್ಸರ್ ಪೀಡಿತ ಬಾಲಕಿಯ ಪೋಷಕರಿಗೆ ನೀಡಲಾಗುತ್ತಿದೆ. ಈ ಹುಡುಗರ ಸಂಬಂಧಿಗಳಾದ ಹಾಗೂ ಸ್ನೇಹಿತರಾದ ಅದ್ನಾನ್, ತಮನ್ನಾ, ಹಸನ್ನಾ ಹಾಗೂ ಯೂಸರ್ ಹಣ ಸಂಗ್ರಹ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ತಿನಿಸುಗಳ ಮಾರಾಟದ ಜೊತೆಗೆ ಮಳಿಗೆಯಲ್ಲಿ ಕ್ಯಾನ್ಸರ್ ಪೀಡಿತ ಬಾಲಕಿಗೆ ಸಹಾಯ ಮಾಡಿ ಎಂಬ ಫಲಕವಿರುವ ಡಬ್ಬವನ್ನು ಇಡಲಾಗಿದೆ. ಈ ಮಸೀದಿಗೆ ನಿತ್ಯ 200 -300  ಮಂದಿ ಪ್ರಾರ್ಥನೆಗಾಗಿ ಬರುತ್ತಿದ್ದು ಈ ಕಾರ್ಯಕ್ಕೆ ಬೆಂಬಲ ದೊರೆಯುತ್ತಿದೆ. ಧರ್ಮದ ಗಡಿ ಮೀರಿದ ಮಾನವೀಯತೆಗೆ ವ್ಯಾಪಕ ನೆರವು ದೊರೆಯುತ್ತಿದೆ.

SCROLL FOR NEXT