ಜಿಲ್ಲಾ ಸುದ್ದಿ

ಜನತೆಗೆ ಕರೆಂಟ್ ಶಾಕ್: ಏ.1ರಿಂದ ವಿದ್ಯುತ್ ದರ ಏರಿಕೆ

Srinivasamurthy VN

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ ಜನತೆಗೆ ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ 13ರಿಂದ 20 ಪೈಸೆ ಹೆಚ್ಚಳ ಮಾಡಲಾಗಿದ್ದು, ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳ ವ್ಯಾಪ್ತಿಯಲ್ಲಿ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಈ ನೂತನ ಜಾರಿಗೊಳಿಸಲು ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗದ ಅಧ್ಯಕ್ಷ ಎಂಆರ್ ಶ್ರೀನಿವಾಸ್ ಅವರು, ಗೃಹ ಬಳಕೆ ವಿದ್ಯುತ್‌ನಲ್ಲಿ ಗರಿಷ್ಟ 100 ಯೂನಿಟ್ ವರೆಗಿನ ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 100 ಯೂನಿಟ್ ಮೇಲ್ಪಟ್ಟ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 13ರಿಂದ 20 ಪೈಸೆ ಹೆಚ್ಚಳವಾಗಲಿದೆ. ಇನ್ನು ವಾಣಿಜ್ಯ ಬಳಕೆ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳವಾಗಲಿದೆ.

ವಿದ್ಯುತ್ ಸರಬರಾಜು ಸಂಸ್ಥೆಗಳಾದ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಮತ್ತು ಚೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ದರವನ್ನು ಹೆಚ್ಚಳ ಮಾಡಲಾಗಿದೆ. 2015-16 ನೇ ಸಾಲಿನ ದರ ಪರಿಷ್ಕರಣೆ ಅಡಿಯಲ್ಲಿ ದರ ಏರಿಕೆಯಾಗಿದ್ದು, ಇದೇ ಏಪ್ರಿಲ್ 1 ರಿಂದ ನೂತನ ದರ ಜಾರಿಯಾಗಲಿದೆ ಎಂದು ತಿಳಿಸಿದರು.

ಒಟ್ಟಾರೆ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ವಿದ್ಯುತ್ ಶಾಕ್ ನೀಡಿದೆ.

SCROLL FOR NEXT