ಜಿಲ್ಲಾ ಸುದ್ದಿ

ಆರ್‍ಟಿಐ ಕಾರ್ಯಕರ್ತ ಕೊಲೆ: ಎಸ್‍ಪಿಪಿಗೆ ರಕ್ಷಣೆ ಒದಗಿಸಲು ಸೂಚನೆ

ಬೆಂಗಳೂರು: ಆರ್‍ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಸರ್ಕಾರಿ ವಿಶೇಷ ಅಭಿಯೋಜಕರಾಗಿರುವ (ಎಸ್‍ಪಿಪಿ) ಸದಾಶಿವ ಮೂರ್ತಿ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಪ್ರಕರಣದ ಎಸ್‍ಪಿಪಿಯಾದ ಸದಾಶಿವಮೂರ್ತಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಅವರನ್ನು ಬದಲಾವಣೆ ಮಾಡಬೇಕು ಮತ್ತು ತಾವು ಆಯ್ಕೆ ಮಾಡಿದ ವಕೀಲರನ್ನು ಎಸ್ ಪಿಪಿಯಾಗಿ ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಉಮಾದೇವಿ ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ, ಲಿಂಗರಾಜು ಕೊಲೆ ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಅರ್ಜಿಯಲ್ಲಿ ಅಮಿಕಸ್ ಕ್ಯೂರಿ ಆಗಿದ್ದ ವಕೀಲ ಹಸ್ಮತ್ ಪಾಷಾ, ಉಮಾದೇವಿಯ ಈ ನಡೆಯನ್ನು ಆಕ್ಷೇಪಿಸಿ ಮಧ್ಯಂತರ ಅರ್ಜಿ ಅಲ್ಲಿಸಿದ್ದರು.

ಸದಾಶಿವಮೂರ್ತಿ ಸೂಕ್ತವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಲಿಂಗರಾಜು ಪತ್ನಿ ಉಮಾದೇವಿ ಆರೋಪದಲ್ಲಿ ಹುರುಳಿಲ್ಲ. ಉಮಾದೇವಿ ಸುಳ್ಳು ಆರೋಪ ಮಾಡಿ ಎಸ್‍ಪಿಪಿಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಈ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿರುವ ಆಕೆ, ಇದೀಗ ಪ್ರಾಸಿಕ್ಯೂಷನ್ ವಿರುದ್ಧ  ನಡೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸದಾಶಿವಮೂರ್ತಿಗೆ ಆರೋಪಿಗಳಿಂದ ಬೆದರಿಕೆ ಇದೆ. ಹೀಗಾಗಿ ಅವರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಆದೇಶಿಸಬೇಕು ಎಂದು ಮಧ್ಯಂತರ ಆರ್ಜಿಯಲ್ಲಿ ವಕೀಲ ಹಸ್ಮತ್ ಪಾಷಾ ಕೋರಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ಎನ್.ಕುಮಾರ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಗೃಹ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಈ ನಿರ್ದೇಶನ ನೀಡಿ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿದೆ.

SCROLL FOR NEXT