ಜಿಲ್ಲಾ ಸುದ್ದಿ

ಪಾಲಿಕೆ ಎಂಜಿನಿಯರ್ ವಿರುದ್ಧ ಕ್ರಿಮಿನಲ್ ದಾವೆ

Srinivasamurthy VN

ಬೆಂಗಳೂರು: ರಕ್ಷಣಾ ಇಲಾಖೆಯ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ನೀಡಿದ್ದಲ್ಲದೇ ಹೈಕೋರ್ಟ್‍ಗೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಜನಪ್ಪ ವಿರುದ್ದ ಹೈಕೋರ್ಟ್ ಕ್ರಿಮಿನಲ್ ಪ್ರಕರಣ ದಾಖಲಿಸುವ ಇಂಗಿತ ವ್ಯಕ್ತಪಡಿಸಿದೆ.

ಇಂದಿರಾನಗರದ ಬಳಿ ಇರುವ ರಕ್ಷಣಾ ಇಲಾಖೆ ವಸತಿ ಪ್ರದೇಶದಲ್ಲಿ 12 ವಾಣಿಜ್ಯ ಮಳಿಗೆಗಳು ತೆರೆದಿದ್ದು ಕಾನೂನು ಬಾಹಿರವಾಗಿ ಬಿಬಿಎಂಪಿ ವಾಣಿಜ್ಯ ಪರವಾನಗಿ ನೀಡಿದ್ದಾರೆಂದು ಆರೋಪಿಸಿ ಅಲ್ಲಿನ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು ವಾಣಿಜ್ಯ ಚಟುವಟಿಕೆ ನಡೆಸದಂತೆ ಪಾಲಿಕೆ ಕ್ರಮ ತೆಗೆದುಕೊಂಡಿರುವುದಾಗಿ ಆಕ್ಷೇಪಣೆ ಸಲ್ಲಿಸಿದರು. ಇದನ್ನು ನಿರಾಕರಿಸಿದ ಅರ್ಜಿದಾರರ ಪರ ವಕೀಲರು ಪಾಲಿಕೆ ಈ ವರೆಗೂ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಆ ಸ್ಥಳದಲ್ಲಿ ಚೆಕ್‍ಸಂ ಇನ್ಫೋ ಸಾಫ್ಟ್ ಎಂಬ ಸಂಸ್ಥೆ ಇರುವುದಾಗಿ ಚಿತ್ರ ಸಮೇತ ದಾಖಲೆ ಒದಗಿಸಿದರು. ಇದಕ್ಕೆ ಕೆಂಡಕಾರಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಪಾಲಿಕೆ ಎಂಜಿನಿಯರ್ ಒಬ್ಬರು ಕೋರ್ಟ್‍ಗೆ ಸುಳ್ಳು ದಾಖಲೆ ಸಲ್ಲಿಸಿದ್ದಲ್ಲದೇ ಆ ದಾಖಲೆಗೆ ಸಹಿ ಕೂಡ ಮಾಡಿದ್ದಾರೆ. ಈ ಮೂಲಕ ಪ್ರತಿವಾದಿಯೊಬ್ಬರನ್ನು ರಕ್ಷಿಸಲು ಮುಂದಾಗಿದ್ದಾರೆ. ಎಂಜಿನಿಯರ್ ನಈ ನಡೆ ಭಾರತೀಯ ದಂಡ ಸಂಹಿತೆ 177 ಸುಳ್ಳು ದಾಖಲೆ ಒದಗಿಸಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮ್ಮೆ ಹೂಡಿ ವಿಚಾರಣೆಗೆ ಒಳಪಡಿಸಲು ಯೋಗ್ಯವಾದ ಪ್ರಕರಣ ಇದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೇ ಬಿಬಿಎಂಪಿ ಪರ ವಕೀಲರು ಕೂಡ ಹಗುರವಾಗಿ ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ವಸತಿ ಪ್ರದೇಶದಲ್ಲಿ ಚೆಕ್‍ಸಂ ಇನ್ಫೋ ಸಾಫ್ಟ್ ಕಾನೂನು ಬಾಹಿರವಾಗಿ ನಡೆಸುತ್ತಿರುವುದಾಗಿ ಆರೋಪವಿದೆ. ಇಷ್ಟಿದ್ದರೂ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸದೆ ಕೋರ್ಟ್‍ಗೂ ಸಹ ಹಾಜರಾಗಿಲ್ಲ. ಈ ಕಾರಣಕ್ಕಾಗಿ ತಪ್ಪಿತಸ್ಥರು ಅಧಿಕಾರಿಗಳೇ ಆಗಿರಲಿ ಅಥವಾ ಸಂಸ್ಥೆಯೇ ಆಗಿರಲಿ ಇದರ ಬಗ್ಗೆ ತಿಳಿಯಲು ತನಿಖೆ ಅಗತ್ಯವಿದೆ. ಅಧಿಕಾರಿ ವಿಚಾರಣೆಗೆ ಒಳಪಡಿಸುವ ಮುನ್ನ ಈ ಕುರಿತು ಸ್ಪಷ್ಟೀಕರಣ ನೀಡುವ ಅವಕಾಶ ಕಲ್ಪಿಸುವುದಾಗಿಯೂ ಆದೇಶದಲ್ಲಿ ತಿಳಿಸಿದೆ. ಈ ಕುರಿತು ಸಂಸ್ಥೆ ಮುಂದಿನ ವಿಚಾರಣೆ ವೇಳೆ ತಮ್ಮ ವಿರುದ್ದ ಯಾವ ಕಾರಣಕ್ಕೆ ತಮ್ಮ ವಿರುದ್ದ ಕ್ರಿಮಿನಲ್ ಪ್ರಕರಣ ಹೂಡಬಾರದು ಎಂದು ಕೋರ್ಟ್‍ಗೆ ತಿಳಿಸುವಂತೆ ಸಮನ್ಸ್ ಜಾರಿ ಮಾಡಿ ವಿಚಾರಣೆ ಮಾರ್ಚ್ 24ಕ್ಕೆ ಮುಂದೂಡಿದೆ.

SCROLL FOR NEXT