ಬೆಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದ `ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನ'ಕ್ಕೆ ನಗರ ಹೊರವಲಯದ ಸಾಲೂರು ಬಳಿ 10 ಎಕರೆ ಜಮೀನು, ಅದರ ಅಭಿವೃದ್ಧಿಗೆ ರು.1ಕೋಟಿ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
ಸಾಲುಮರದ ತಿಮ್ಮಕ್ಕ ಶತಮಾನೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ಜೀವನ ಚರಿತ್ರೆ ಲೋಕಾರ್ಪಣೆ, ಹಸಿರು ಪ್ರಶಸ್ತಿ ಪ್ರದಾನ ಹಾಗೂ ಪ್ರತಿ ಷ್ಠಾನ ಉದ್ಘಾಟನೆ ಸಮಾರಂಭದಲ್ಲಿ ಸಚಿವರಾದ ಶ್ರೀನಿವಾಸ ಪ್ರಸಾದ್ ಮತ್ತು ಎಚ್.ಆಂಜನೇಯ ಸರ್ಕಾರದ ಪರವಾಗಿ ಈ ವಿಷಯ ಪ್ರಕಟಿಸಿದರು.
ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀನಿವಾಸ ಪ್ರಸಾದ್, ನಿಸ್ವಾ ರ್ಥದಿಂದ ಪರಿಸರ ಸೇವೆ ಮಾಡಿದ ಸಾಲು ಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಗೆ ಸ್ಫೂರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಸಸ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಪೂರಕವಾದ ಯೋಜನೆ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಸಾಲೂರು ಬಳಿ 10 ಎಕರೆ ಭೂಮಿ ನೀಡಲಾಗುವುದು ಎಂದರು.
ಮೂಲಭೂತ ಸೌಕರ್ಯ: ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಚಿವ ಎಚ್.ಆಂಜನೇಯ, ಸಾಲು ಮರದ ತಿಮ್ಮಕ್ಕ ಪ್ರತಿಷ್ಠಾನವು ಎಲ್ಲ ರೀತಿಯ ಪರಿಸರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ರು.1 ಕೋಟಿ ಅನುದಾನ ನೀಡಲು ನಿರ್ಧರಿಸಿದೆ ಎಂದು ಪ್ರಕಟಿಸಿದರು. ಪ್ರತಿಷ್ಠಾನಕ್ಕೆ ಕಂದಾಯ ಇಲಾಖೆ 10 ಎಕರೆ ಭೂಮಿ ಮಂಜೂರು ಮಾಡಿದ ತಕ್ಷಣವೇ ಈ ಹಣವನ್ನು ಮಂಜೂರು ಮಾಡಿ, ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ವೆಚ್ಚ ಮಾಡಲಾಗುವುದು ಎಂದರು.
ಪಠ್ಯದಲ್ಲಿ ಅಳವಡಿಸಿ: ಲೇಖಕಿ ಬೇಲೂರು ಇಂದಿರಾ ಅವರು ಬರೆದ `ಸಾಲುಮರದ ತಿಮ್ಮಕ್ಕ ಜೀವನಚರಿತ್ರೆ ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಕೃತಿ ಅತ್ಯಂತ ವಸ್ತುನಿಷ್ಠ ವಾಗಿದೆ. ತಿಮ್ಮಕ್ಕ ಅವರ ಅನುಭವದ ಮಾತುಗಳು ಇಲ್ಲಿ ಅಕ್ಷರದ ರೂಪ ತಾಳಿವೆ. ಸರ್ಕಾರ ಇದನ್ನು ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣದಲ್ಲಿ ಪಠ್ಯವಾಗಿ ಅಳವಡಿಸಬೇಕು ಎಂದು ಸಲಹೆ ನೀಡಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ, ಸರ್ಕಾರ ತಿಮ್ಮಕ್ಕ ಪ್ರತಿಷ್ಠಾನಕ್ಕೆ ಹತ್ತು ಎಕರೆ ಭೂಮಿ ನೀಡುವುದಾಗಿ ಹೇಳಿದೆ. ಅದರ ಅಭಿವೃದ್ಧಿಗೆ ಅನುದಾನ ನೀಡುವುದಾಗಿಯೂ ಭರವಸೆ ನೀಡಿದೆ. ತಿಮ್ಮಕ್ಕ ಅವರಿಗೆ ಈ ತನಕ ಸಿಕ್ಕ ಪ್ರಶಸ್ತಿ ಪತ್ರಗಳಿಗಿಂತ ಇದು ದೊಡ್ಡ ಗೌರವವಾಗಿದೆ ಎಂದರು.
ಸಚಿವೆ ಮಾಶ್ರೀ, ಸಾಲು ಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನ ಲೋಕಾರ್ಪಣೆಗೊಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವ ರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಪ್ರಭು ಸ್ವಾಮೀಜಿ, ಹಿರಿಯ ಪತ್ರಕರ್ತ ರವಿ ಹೆಗಡೆ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಹಾಜರಿದ್ದರು. ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದ ಹಲವರಿಗೆ `2015ನೇ ಸಾಲಿನ ಸಾಲು ಮರದ ತಿಮ್ಮಕ್ಕ ಹಸಿರು ಪ್ರಶಸ್ತಿ' ನೀಡಿ ಗೌರವಿಸಲಾಯಿತು.ಹಲವರನ್ನು ವಿಶೇಷವಾಗಿಗಿ ಸನ್ಮಾನಿಸಲಾಯಿತು.