ಬೆಂಗಳೂರು: ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದರಿಂದ ಅವರ ಮೃತದೇಹ ಹೊರತೆಗೆದು ಮತ್ತೊಮ್ಮೆ ಶವ ಪರೀಕ್ಷೆ ಮಾಡುವ ಸಾಧ್ಯತೆ ಇದೆ. ಇಂಥ ನಿಗೂಢ ಹಾಗೂ ಗೊಂದಲದ ಪ್ರಕರಣಗಳಲ್ಲಿ ಪ್ರಥಮವಾಗಿ ಮೃತದೇಹವನ್ನು ಮತ್ತೆ ಹೊರತೆಗೆಸಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿಸಲಾಗುತ್ತದೆ.
ಅಗತ್ಯಬಿದ್ದರೆ ಎರಡು ಅಥವಾ ಮೂರು ಕಡೆ ಮರಣೋತ್ತರ ತಜ್ಞರಿಂದ ಪರೀಕ್ಷೆ ನಡೆಸಲಾಗುತ್ತದೆ. ಈ ಹಿಂದೆ ಇದೇ ರೀತಿ ಮರು ಮರಣೋತ್ತರ ಪರೀಕ್ಷೆ ನಡೆಸಿರುವ ಪ್ರಕರಣಗಳ ಉದಾಹರಣೆಗಳೂ ಸಾಕಷ್ಟಿವೆ ಎನ್ನುತ್ತಾರೆ ಸಿಬಿಐ ಹಿರಿಯ ಅಧಿಕಾರಿಗಳು.
ಆದ್ದರಿಂದ ಈ ಪ್ರಕರಣದಲ್ಲೂ ಪೊಲೀಸರು ರವಿ ಅವರ ಮೃತದೇಹ ಹೊರ ತೆಗೆಸಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿದರೂ ಆಶ್ಚರ್ಯವಿಲ್ಲ. ಜತೆಗೆ ಲ್ಯಾಪ್‍ಟಾಪ್, ಐ-ಪ್ಯಾಡ್, 3 ಮೊಬೈಲ್, ಹಾರ್ಡ್ ಡಿಸ್ಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೈದ್ರಾಬಾದ್ ವಲಯದ ಸಿಬಿಐ ಅಧಿಕಾರಿಗಳು ನಗರದ ಸಿಐಡಿ ಅಧಿಕಾರಿಗಳಿಂದ ಪಡೆಯುತ್ತಾರೆ. ಅವರ ಸಾವಿಗೆ ಮುನ್ನ 24 ಗಂಟೆಯೊಳಗೆ ಮಾತನಾಡಿದ ಎಲ್ಲರಿಂದ ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಕಲೆಹಾಕುತ್ತಾರೆ ಎಂದು ಮೂಲಗಳು ತಿಳಿಸಿವೆ.