ಜಿಲ್ಲಾ ಸುದ್ದಿ

ವೋಲ್ವೋ ವಾರ್

ವಿಧಾನಪರಿಷತ್ತು: ಬೆಂಗಳೂರು, ಮೈಸೂರಿನಲ್ಲಿ ಮಾತ್ರ ವೋಲ್ವೋ ಬಸ್ಸು ಓಡಾಡಿದರೆ ಸಾಕೇ, ಉತ್ತರ ಕರ್ನಾಟಕ- ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕನಿಷ್ಠ ಸುಸ್ಥಿತಿಯಲ್ಲಿರುವ ಬಸ್ಸಾದರೂ ಓಡಾಡುವುದು ಬೇಡವೇ... ನಮಗೆ `ಹಳೇ ಭಾಗ್ಯ'ವೇ ಗತಿಯೇ? ಹೀಗೊಂದು ವಿಶಿಷ್ಟ ಪ್ರಶ್ನೆ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.

ಕವಟಗಿಮಠ ಮಹಂತೇಶ ಮಲ್ಲಿಕಾರ್ಜುನ ಅವರು ಈ ಪ್ರಶ್ನೆ ಎತ್ತಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ ಹೊಸ ಹೊಸ ಬಸ್ಸುಗಳನ್ನು ಖರೀದಿಸುತ್ತಲೇ ಇದೆ. ಆದರೆ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಹೊಸ ಬಸ್ಸುಗಳ ಖರೀದಿ ಸಂಖ್ಯೆ ಅತಿ ಕಡಿಮೆ ಇದೆ. ಹೀಗಾದರೆ ಈ ಭಾಗಗಳಲ್ಲಿ ಉತ್ತಮ ಬಸ್‍ಗಳ ಸೌಕರ್ಯ ಕಡಿಮೆ ಎಂದಾಯಿತಲ್ಲ, ಏಕೆ ಹೀಗೆ ತಾರತಮ್ಯವಾಗುತ್ತಿದೆ ಎಂದು ಬೇಸರಿಸಿದರು.

ಈ ವೇಳೆ ದನಿಗೂಡಿಸಿದ ಬಸವರಾಜ ಹೊರಟ್ಟಿ, ಸಚಿವರು ಒಮ್ಮೆ ಬೆಂಗಳೂರಿನಿಂದ- ಹುಬ್ಬಳ್ಳಿಗೆ ಹೋಗಿಬರಲಿ. ದಾರಿಯುದ್ದಕ್ಕೆ ಕನಿಷ್ಠ 10 ಬಸ್‍ಗಳಾದರೂ ರಿಪೇರಿಗಾಗಿ ನಿಂತಿರುತ್ತವೆ. ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸುವುದು ಸರಿಯಲ್ಲವೆಂದರು. ಚಿಕ್ಕೋಡಿ ಡಿಪೋ ಒಂದರಲ್ಲೇ 9 ಲಕ್ಷ ಕಿಲೋಮೀಟರ್ ಓಡಿರುವ 101 ಬಸ್ ಗಳಿವೆ. ಇಂತಹ ಬಸ್‍ಗಳು ಇನ್ನೆಷ್ಟು ಓಡಬೇಕು. ಗ್ರಾಮೀಣ ಜನರು ಉತ್ತಮ ಬಸ್‍ಗಳಲ್ಲಿ ಓಡಾಡುವ `ಭಾಗ್ಯ'ವಿಲ್ಲವೇ, ನಮಗೆ `ಹಳೇ ಭಾಗ್ಯ'ವೇ ಗತಿಯೇ ಎಂದು ಕವಟಗಿಮಠ ಅವರು ಸರ್ಕಾರವನ್ನು ತಿವಿದರು.

ಸರ್ಕಾರ ಇನ್ನಾದರೂ ಹೆಚ್ಚು ಗಮನಹರಿಸಿ ತಾರತಮ್ಯ ನಿವಾರಿಸಬೇಕೆಂದರು. ಈ ಹಿಂದೆ 7.5 ಲಕ್ಷ ಕಿಲೋಮೀಟರ್ ಓಡಿದ ಬಸ್‍ಗಳನ್ನು ಸ್ಕ್ರಾಪ್ ಮಾಡಲಾಗುತ್ತಿತ್ತು. ನಂತರ ಅದು 8.5 ಲಕ್ಷ ಕಿ. ಮೀ.ಗೆ ವಿಸ್ತರಣೆಗೊಂಡಿತು. ಈಗ 9 ಲಕ್ಷ ಕಿ.ಮೀ. ವರೆಗೆ ಮತ್ತು ಬಸ್ಸಿನ ಸ್ಥಿತಿ ಗಮನಿಸಿ ಕಾರ್ಯಾಚರಣೆಯಿಂದ ವಾಪಾಸು ಪಡೆಯಲಾಗುತ್ತದೆ ಎಂದು ವಿವರಿಸಿ ದರಲ್ಲದೇ, ಬಿಎಂಟಿಸಿಯಲ್ಲಿ ಹೊಸ ಹೊಸ ಬಸ್‍ಗಳು ಬಂದಿರಬಹುದು, ಆದರೆ ಸಾಲ 611 ಕೋಟಿ ರುಪಾಯಿ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಂದರು.

ಎಲ್ಲೆಡೆ ನಗರ ಸಾರಿಗೆ: ಜೆನರ್ಮ್

ಯೋಜನೆಯಡಿ ರಾಜ್ಯದ ಎಲ್ಲಾ ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ರಾಜ್ಯದ ಎಲ್ಲಾ ನಗರಗಳಲ್ಲೂ ನಗರ ಸಾರಿಗೆ ಆರಂಭವಾಗುವ ಮೂಲಕ ನಗರ ಸಾರಿಗೆ ವ್ಯವಸ್ಥೆಯಲ್ಲಿ ಕರ್ನಾಟಕವು ದೇಶದ ಮೊದಲ ರಾಜ್ಯವಾಗಲಿದೆ ಎಂದು ಹೇಳಿದರು.

SCROLL FOR NEXT