ಬೆಂಗಳೂರು: ಬಿಬಿಎಂಪಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನಕ್ಕೂ ಬಿಬಿಎಂಪಿ ವಿಭಜನೆ ವಿಚಾರಕ್ಕೂ ಸಂಬಂಧವೇ ಇಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2015 ಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಪರಿಶೀಲನಾ ಸಮಿತಿಯ ಪ್ರಾರಂಭಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನ್ಯಾಯಾಲಯ ಸೂಚನೆಯಂತೆ ಚುವಾವಣೆ ನಡೆಸಬೇಕಾದ್ದು ಚುನಾವಣಾ ಆಯೋಗದ ಕರ್ತವ್ಯ. ಆದರೆ, ಆಡಳಿತದ ದೃಷ್ಠಿಯಿಂದ ವಿಭಾಗ ಮಾಡಬೇಕೇ ಬೇಡವೇ ಎಂಬುದು ಶಾಸನಸಭೆಗೆ ಬಿಟ್ಟ ವಿಚಾರ.
ಈಗಾಗಲೇ ಪರಿಷತ್ತಿನ ಸದನ ಸಮಿತಿ ರಚನೆಯಾಗಿ ಮೊದಲ ಸಭೆ ನಡೆದಿದೆ. ಮೂರು ಗಂಟೆಗಳ ಕಾಲ ವ್ಯಾಪಕವಾಗಿ ಎಲ್ಲಾ ವಿಚಾರದಲ್ಲೂ ಕೂಡ ಚರ್ಚೆ ಆಯಿತು, ಸದಸ್ಯರೆಲ್ಲರೂ ಕೂಡ ಅವರವರ ವಿಭಿನ್ನ ಅಭಿಪ್ರಾಯ ಸೂಚಿಸಿದ್ದಾರೆ. ಇದು ಒಂದೇ ದಿನಗದಲ್ಲಿ ಮುಗಿಯುವುದಿಲ್ಲ ಎಂದರು.