ಜಿಲ್ಲಾ ಸುದ್ದಿ

343 ಕೇಂದ್ರಗಳಲ್ಲಿ ಸಿಇಟಿ

Srinivasamurthy VN

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೇ 12 ಮತ್ತು 13ರಂದು ನಡೆಯಲಿದ್ದು, ಈ ಬಾರಿ 1,57,580 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ.

ವಾಹನ ಮಾಲೀಕರ ಸಂಘದ ಮುಷ್ಕರದಿಂದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಒಟ್ಟು 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಬೆಂಗಳೂರು ನಗರವೊಂದರಲ್ಲೇ
73 ಪರೀಕ್ಷಾ ಕೇಂದ್ರಗಳಿವೆ. 82,079 ವಿದ್ಯಾರ್ಥಿಗಳು ಹಾಗೂ 75,501 ವಿದ್ಯಾರ್ಥಿನಿ ಯರು ಪರೀಕ್ಷೆ ಬರೆಯುತ್ತಿದ್ದಾರೆ. 2219 ಹೊರನಾಡ ಕನ್ನಡಿಗರು ಪರೀಕ್ಷೆ ತೆಗೆದುಕೊಳ್ಳುತ್ತಿದ್ದು, ಅವರಿಗಾಗಿ 53 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು.

ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಪರೀಕ್ಷಾ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಮುಖ್ಯ ಪರೀಕ್ಷಾಧಿಕಾರಿಗಳಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಸಹಾಯಕ ಆಯುಕ್ತರ ಮಟ್ಟ ಅಧಿಕಾರಿಯನ್ನು ವಿಚಕ್ಷಕರನ್ನಾಗಿ ನೇಮಿಸಲಾಗಿದೆ. 343 ವೀಕ್ಷಕರು, 343 ನಿರೀಕ್ಷಕರು ಹಾಗೂ 9911 ಪರೀಕ್ಷಾ ಮೇಲ್ವಿಚಾರಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬಿಎಸ್‍ಸಿ ಕೃಷಿ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕೃಷಿ ಮೀಸಲನ್ನು ಶೇ.40ಕ್ಕೆ ಏರಿಸಲಾಗಿದೆ. ಬಜೆಟ್‍ನಲ್ಲಿ ಹೇಳಿದಂತೆ ರೈತರ ಮಕ್ಕಳಿಗೆ ಪದವಿಗೆ ಪ್ರವೇಶ ಪಡೆಯುವ ಅವಕಾಶ ಹೆಚ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆ 16ರಂದು ನಡೆಯಲಿದೆ. ಹಿಂದಿನ ವೇಳಾಪಟ್ಟಿಯಂತೆ ಕೌನ್ಸೆಲಿಂಗ್ ನಡೆಯಲಿದ್ದು, ಮೇ 26ರಂದು ಫಲಿತಾಂಶ ಪ್ರಕಟಿಸುತ್ತೇವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್.ಎನ್.ಗಂಗಾಧರಯ್ಯ ಹೇಳಿದ್ದಾರೆ.
ಸಹಾಯವಾಣಿ- 080 23460460.

ಸಿಇಟಿ ಅವ್ಯವಸ್ಥೆ ಉತ್ತರಿಸಲು ನಿರ್ದೇಶಕಿ ನಕಾರ
ಬೆಂಗಳೂರು:
ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಿಇಟಿ ಅವ್ಯವಸ್ಥೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಸುಷ್ಮಾ ಗೋಡಬೋಲೆ ಉತ್ತರಿಸಲು ನಿರಾಕರಿಸಿದರು. ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಮಾದ ಹಾಗೂ ಹೆಚ್ಚುವರಿ ಅಂಕ ನೀಡಿಕೆ, ಸಿಇಟಿ ಮಾಹಿತಿ ಪುಸ್ತಕ ಪ್ರಕಟಣೆ ವಿಳಂಬ, ಬ್ಲೋ-ಅಪ್ ಪಠ್ಯವಸ್ತು ವಿವಾದ, ಭ್ರಷ್ಟ ಹಾಗೂ ನಿವೃತ್ತ ನೌಕರರ ನೇಮಕ ಹಾಗೂ ಕಡತ ವಿಲೇವಾರಿ ವಿಳಂಬಕ್ಕೆ ಸಂಬಂಧಿಸಿ ಕೇಳಿದ ಯಾವುದೇ ಪ್ರಶ್ನೆಗಳಿಗೂ ಸುಷ್ಮಾ ಉತ್ತರಿಸಲಿಲ್ಲ. ಸಿಇಟಿಗೆ ಸಂಬಂಧಿಸಿದ ಮಾಹಿತಿ ನೀಡದೆ ಪತ್ರಿಕಾಗೋಷ್ಠಿಯಿಂದ ಅರ್ಧದಲ್ಲೇ ಹೊರನಡೆದ ಕಾರಣ ಆಡಳಿತಾಧಿಕಾರಿ ಗಂಗಾಧರಯ್ಯ ಪತ್ರಿಕಾಗೋಷ್ಠಿ ಮುಂದುವರಿಸಿದರು.

SCROLL FOR NEXT