ಜಿಲ್ಲಾ ಸುದ್ದಿ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರುಹಕ್ಕಿಗೆ ಹಸಿರು ಬಣ್ಣ?

Rashmi Kasaragodu

ಬೆಂಗಳೂರು:  ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರುಹಕ್ಕಿ (ಪೆಲಿಕನ್)ಗಳಿಗೆ ಹಸಿರು ಬಣ್ಣ (ಪೇಂಟ್) ಬಳಿದಿರುವ ಬಗ್ಗೆ ವರದಿಯಾಗಿದೆ. 2 ದಿನಗಳ ಹಿಂದೆ ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಪಕ್ಷಿಶಾಸ್ತ್ರಜ್ಞ ಪ್ರಶಾಂತ್ ಕುಮಾರ್ ಎಂಬವರು ಹಸಿರು ಬಣ್ಣ ಬಳಿದಿರುವ ಪೆಲಿಕನ್‌ಗಳ ಫೋಟೋ ಅಪ್‌ಲೋಡ್ ಮಾಡಿ, ಕ್ರೂರತೆಯನ್ನು ಬಯಲಿಗೆಳೆದಿದ್ದರು.

ಕೆಲವೊಂದು ನೀರುಹಕ್ಕಿಗಳಿಗೆ ಪೂರ್ತಿ ಬಣ್ಣ ಬಳಿದಿದ್ದರೆ, ಇನ್ನು ಕೆಲವು ಹಕ್ಕಿಗಳ ರೆಕ್ಕೆ ಪುಕ್ಕದಲ್ಲಿ ಅಲ್ಲಲ್ಲಿ ಬಣ್ಣಗಳಿವೆಯಂತೆ. ಹೀಗ್ಯಾಕೆ ಎಂದು ಕೇಳಿದರೆ ನಂಬಲಸಾಧ್ಯವಾದ ರೀತಿಯಲ್ಲಿದೆ ಉದ್ಯಾನವನದವರ ಉತ್ತರ. ಬಣ್ಣ ಬಳಿದದ್ದು ಮಾತ್ರವಲ್ಲ, ಸೀಮೆ ಎಣ್ಣೆ ಬಳಸಿ ಆ ಪೇಂಟ್ ತೆಗೆಯಲಾಗುತ್ತಿದೆ.

ಆದಾಗ್ಯೂ, ಬನ್ನೇರುಘಟ್ಟ ಉದ್ಯಾನವನದಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದು, ಈ ವೇಳೆ ಹಕ್ಕಿಗಳಿಗೂ ಬಣ್ಣ ಬಳಿಯಲಾಯಿತೆ? ಎಂಬ ಪ್ರಶ್ನೆ ಎದ್ದಿದೆ.

ಪೇಂಟ್‌ನಲ್ಲಿ ಸೀಸ ಇರುವ ಕಾರಣ ಅದು ಪಕ್ಷಿಗಳಿಗೆ ಹಾನಿಕಾರಕ. ಅದು ಮಾತ್ರವಲ್ಲದೆ ಸೀಮೆಎಣ್ಣೆಯಿಂದಾಗಿ ಅವುಗಳ ದೇಹದಲ್ಲಿ ಉರಿ ಉಂಟಾಗಿ ಅಸಾಧ್ಯ ನೋವು ಅನುಭವಿಸುತ್ತವೆ ಅಂತಾರೆ ವೈದ್ಯರು. 

ಪ್ರಾಣಿ- ಪಕ್ಷಿ ಸಂರಕ್ಷಣಾಲಯದಲ್ಲಿ ಪಕ್ಷಿಗಳಿಗೆ ಪೇಂಟ್ ಬಳಿದು ಕ್ರೂರತೆ ಮೆರೆದಿರುವುದು ಯಾಕಾಗಿ? ಈ ಪೆಲಿಕನ್‌ಗಳಿಗೆ ಬಣ್ಣ ಬಳಿದಿರುವುದರ ಹಿಂದಿರುವ ಉದ್ದೇಶ ಏನು? ಬನ್ನೇರುಘಟ್ಟ ಉದ್ಯಾನವನದವರು ಉತ್ತರಿಸಬೇಕಾಗಿದೆ.




SCROLL FOR NEXT