ಬೆಂಗಳೂರು: ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕಗಳು ಕಳೆದಿದ್ದರೂ ಹಳ್ಳಿಗಳು ಗುಲಾಮ ವ್ಯವಸ್ಥೆಯಿಂದ ಹೊರಬಂದಿಲ್ಲ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಳ್ಳಿಗಳಲ್ಲಿ ಇಂದಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ. ಅಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಜಾರಿ ಮಾಡುವ ತೀರ್ಮಾನಗಳೇ ಅಂತಿಮವಾಗಲಿವೆ. ಹೀಗಾಗಿ ಗ್ರಾಮದ ಕಟ್ಟ ಕಡೆಯ ವ್ಯಕ್ತಿ ಸೌಲಭ್ಯಗಳಿಂದ ವಂಚಿತನಾಗಿದ್ದಾನೆ' ಎಂದು ಹೇಳಿದರು. ಇನ್ನೂ ರಾಜ್ಯದ ಅನೇಕ ಹಳ್ಳಿಗಳ ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ಗ್ರಾಮಗಳಿಗೆ ಬೇಕಿರುವ ಮೂಲ ಸೌಕರ್ಯಗಳು ದೊರೆತಿಲ್ಲ. ಸಾಮಾನ್ಯ ಕೆಲಸಕ್ಕೂ ವಿಧಾನಸೌಧದ ಮೆಟ್ಟಲೇರಬೇಕಿದೆ. ಇದನ್ನು ಸರಿಪಡಿಸಬೇಕಾದರೆ ಪಂಚಾಯತಿ ಮಟ್ಟದಲ್ಲಿ ಬದಲಾವಣೆಯಾಗಬೇಕೆಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, `ಅಧಿಕಾರವನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ಗ್ರಾಮದಲ್ಲಿ ವಾಸಿಸುವ ವ್ಯಕಿಯೂ ಅಧಿಕಾರ ಚಲಾಯಿಸುವಂತಾಗಬೇಕು. ಗ್ರಾಮದ ಸಮಸ್ಯೆಗಳನ್ನು ಗ್ರಾಮಸ್ಥರೇ ಬಗೆಹರಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯತಿ ವ್ಯವಸ್ಥೆ ತರಲಾಯಿತು. ಆದರೆ, ಗ್ರಾಪಂ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಅಡಗಿದೆ' ಎಂದು ಆರೋಪಿಸಿದರು.
ಗ್ರಾಪಂ ವ್ಯವಸ್ಥೆಗೆ ಶಕ್ತಿ ತುಂಬಬೇಕಾಗಿದೆ. ಆದ್ದರಿಂದ ಈಗಿರುವ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತಂದು ಮಾದರಿ ಗ್ರಾಮ ಪಂಚಾಯಿತಿ ವ್ಯವಸ್ಥೆಯಾಗಿ ಬದಲಾಯಿಸಬೇಕಾದ ಅಗತ್ಯದೆ. ಈ ನಿಟ್ಟಿನಲ್ಲಿ ಕಮ್ಯೂನಿಸ್ಟ್ ಪಕ್ಷ ಹಾಗೂ ದಲಿತ ಸಂಘಟನೆಗಳು ಜನತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ ಎಂದು ಅವರು ತಿಳಿಸಿದರು. ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜು, ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಎಸ್ ಯುಸಿಐನ ಎಂ.ಎಸ್.ಪ್ರಕಾಶ್, ದಸಂಸ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್ ಉಪಸ್ಥಿತರಿದ್ದರು.