ಜಿಲ್ಲಾ ಸುದ್ದಿ

ನಿಲ್ಲದ ಮಳೆ: ಸಿಡಿಲಿಗೆ ಮಹಿಳೆ ಬಲಿ

ಬೆಂಗಳೂರು: ಉತ್ತರ ಕರ್ನಾಟಕ, ಹಳೇ ಮೈಸೂರು ಭಾಗ ಹಾಗೂ ಮಲೆನಾಡು ಭಾಗದಲ್ಲಿ ಬೇಸಿಗೆ ಮಳೆ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬಿರುಗಾಳಿ ಸಹಿತ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗರುಳಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಾಯಬಾಗ ತಾಲೂಕಿನ ತಾರಿಹಾಳ ಗ್ರಾಮದ ಶಿವಕ್ಕ ಅಪ್ಪಯ ಉಣಕಲ್(70) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಂಚಲಿಯಲ್ಲಿ ಗಾಳಿಯ ಆರ್ಭಟಕ್ಕೆ 130ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿಹೋಗಿದೆ. ಐವರಿಗೆ ಗಾಯವಾಗಿದೆ. ಸಾವಂತಿ ಹಿಪ್ಪರಗಿ ಎಂಬವರ ಮನೆಯ ಛಾವಣಿ ಅದಕ್ಕೆ ಕಟ್ಟಿದ ತೊಟ್ಟಿಲು ಸಮೇತ ಹಾರಿ ಹೋಗಿ ಸುಮಾರು 100 ಅಡಿ ದೂರ ಬಿದ್ದಿದೆ.

ತೊಟ್ಟಿಲಲ್ಲಿದ್ದ ಎರಡು ತಿಂಗಳು ಮಗು (ಭೂಮಿಕಾ) ಗಂಭೀರವಾಗಿ ಗಾಯಗೊಂಡಿದ್ದು, ಬನಹಟ್ಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೋಳ, ಕಬ್ಬು, ಆಲೂಗಡ್ಡೆ ಬೆಳೆಗೆ ಹಾನಿಯಾಗಿದೆ. ಸುಮಾರು 50 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, 2 ವಿದ್ಯುತ್ ಪರಿವರ್ತಕಗಳಿಗೂ ಧಕ್ಕೆಯಾಗಿದೆ. ಮೈಸೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಗದಗ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದೆ.

SCROLL FOR NEXT