ಬೆಂಗಳೂರು: ಕೆರೆ ಒತ್ತುವರಿ ತೆರವಿನಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಭೂಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲೆ ಮಾಡುವುದಕ್ಕೆ ವಿಶೇಷ ಘಟಕ ತೆರೆಯುವುದು ಸೂಕ್ತ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
1964ರ ಭೂ ಕಂದಾಯ ಮತ್ತು ಭೂ ಒತ್ತುವರಿ ತಡೆ ಕಾಯ್ದೆ ಸೆಕ್ಷನ್ 192(ಎ) ಒತ್ತುವರಿಗೆ ಸಹಕರಿಸಿದ, ತಪ್ಪು ದಾಖಲೆ ಸೃಷ್ಟಿಸಿದ ಅಧಿಕಾರಿ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಯ ವಿರುದಟಛಿ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿದೆ. ಹೀಗಾಗಿ ಸರ್ಕಾರ ಕಾನೂನು ರೀತ್ಯ ಪ್ರದತ್ತವಾಗುವ ಈ ಅಧಿಕಾರವನ್ನು ಬಳಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದರ ಜತೆಗೆ ತೆರವು ಕಾರ್ಯಾಚರಣೆಯಿಂದ ನಿರ್ಗತಿಕರಾದವರಿಗೆ ಪುನರ್ವಸತಿ ಕಲ್ಪಿಸುವುದಕ್ಕೂ ಮುಂದಾಗಬೇಕು ಎಂದು ಹೇಳಿದ್ದಾರೆ.
ಕಂದಾಯ ಇಲಾಖೆ ಉಪನಿಯಮಗಳ ಪ್ರಕಾರ ಬಿಡಿಎ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಬಡಾವಣೆ ನಿರ್ಮಾಣವಾದಾಗ ಅಥವಾ ಸರ್ಕಾರಿ ಕಟ್ಟಡಗಳು ನಿರ್ಮಾಣವಾದಾಗ ಆ ಕೆರೆಯನ್ನು ಪಟ್ಟಿಯಿಂದ ಕೈ ಬಿಡುವುದಕ್ಕೆ ಅವಕಾಶವಿದೆ. ಆದರೆ, ಈ ಹಿಂದಿನ ಸರ್ಕಾರಗಳು ಬಡಾವಣೆ ನಿರ್ಮಿಸಿದ ಕೆರೆಯನ್ನು ಪಟ್ಟಿಯಿಂದ ಕೈ ಬಿಟ್ಟಿಲ್ಲ. ಈಗ ಆ ನಿಯಮವನ್ನು ಜಾರಿಗೆ ತರಲು ಸಾಧ್ಯವಿದೆ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
192(ಎ) ಪ್ರಕಾರ ಸರ್ಕಾರ ಇಂಥ ಸಂದರ್ಭದಲ್ಲಿ ಭೂಗಳ್ಳರ ವಿರುದ್ಧ ದಾಖಲಾದ ಪ್ರಕರಣಗಳನ್ನು ವಿಚಾರಣೆ ನಡೆಸುವುದಕ್ಕೆ ವಿಶೇಷ ನ್ಯಾಯಾಲಯ ತೆರೆಯುವುದಕ್ಕೆ ಅವಕಾಶವಿದೆ. ಒಮ್ಮೆ ನ್ಯಾಯಾಲಯ ಸ್ಥಾಪನೆಯಾದರೆ ಎಲ್ಲ ಪ್ರಕರಣಗಳು ಅಲ್ಲಿಗೆ ವರ್ಗಾಯಿಸಲ್ಪಡುತ್ತವೆ. ಆದರೆ, ಖರೀದಿದಾರರಿಗೆ ಆದ ನಷ್ಟದ ಬಗ್ಗೆ ಪರಿಶೀಲಿಸುವುದೂ ಅಗತ್ಯ. ಭೂಗಳ್ಳರು ನಡೆಸಿದ ಮೋಸದಿಂದ ಆದ ನಷ್ಟವನ್ನು ವಸೂಲಿ ಮಾಡುವುದಕ್ಕೂ ಅವಕಾಶವಿದೆ. ಹೀಗಾಗಿ ವಿಶೇಷ ಘಟಕ ತೆರೆಯುವುದು ಸೂಕ್ತ. ಈ ಘಟಕಕ್ಕೆ ಉನ್ನತ ಅಧಿಕಾರಿಯನ್ನು ನೇಮಕ ಮಾಡುವುದರಿಂದ ನಷ್ಟ ಪ್ರಮಾಣ ಪತ್ಯೆ ಹಚ್ಚುವುದರ ಜತೆಗೆ ನಿರ್ಗತಿಕರಾದವರಿಗೆ ಪುನರ್ವಸತಿ ಕಲ್ಪಿಸುವುದಕ್ಕೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.