ಬೆಂಗಳೂರು: ಪರಿಣಾಮಕಾರಿ ಗಸ್ತು ವ್ಯವಸ್ಥೆ ಹಾಗೂ ಅಪರಾಧಿಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ನಗರದಲ್ಲಿ ಗಸ್ತು ತಿರುಗುವ ಪೊಲೀಸ್ ಹೊಯ್ಸಳ ವಾಹನಗಳಿಗೆ ಕ್ಯಾಮೆರಾ ಅಳವಡಿಸಿದೆ.
ಪ್ರಾಯೋಗಿಕವಾಗಿ ಆಗ್ನೇಯ ವಿಭಾಗದ 14 ಠಾಣೆಗಳ ವ್ಯಾಪ್ತಿಯಲ್ಲಿಗಸ್ತು ತಿರುಗುವ 25 ಹೊಯ್ಸಳ ವಾಹನಗಳ ಪೈಕಿ 15 ವಾಹನಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸರು ಯಾವ ಸ್ಥಳದಲ್ಲಿ ಗಸ್ತು ತಿರುಗುತ್ತಾರೆ? ಯಾವ ಸಮಯಕ್ಕೆ, ಯಾವ ಪ್ರದೇಶದಲ್ಲಿರುತ್ತಾರೆ ಎನ್ನುವುದನ್ನು ನಿರಂತರವಾಗಿ ಗಮನಿಸ ಬಹುದು. ಅಲ್ಲದೇ ಪೊಲೀಸರ ಭ್ರಷ್ಟಾಚಾರಕ್ಕೂ ಇದು ಕಡಿವಾಣ ಹಾಕಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಮಳೆ, ಬಿಸಿಲಿಗೆ ಹಾನಿಯಾಗದಂತೆ ಪ್ಲಾಸ್ಟಿಕ್ ಕವಚ ಹೊಂದಿರುವ ಕ್ಯಾಮೆರಾವನ್ನು ವಾಹನದ ಮೇಲೆ ಸೈರನ್ ಲೈಟ್ ಗಳ ರಕ್ಷಣೆಗಿರುವ ತಂತಿಗಳ ಮೇಲೆ ಅಳವಡಿಸಲಾಗಿದೆ. ವಿಡಿಯೋ ರೆಕಾರ್ಡಿಂಗ್ ವ್ಯವಸ್ಥೆ ವಾಹನದ ಒಳಭಾಗದಲ್ಲಿದೆ. ಗಸ್ತು ತಿರುಗಿದ ವಾಹನ ವಾಪಸ್ ಠಾಣೆಗೆ ಬಂದ ನಂತರ ಪ್ರತಿ 12 ಗಂಟೆಗಳಿಗೊಮ್ಮೆ ವಾಹನದಲ್ಲಿರುವ ರೆಕಾರ್ಡಿಂಗ್ ಹಾರ್ಡ್ ಡಿಸ್ಕ್ ತೆರೆದು ಅದರಲ್ಲಿರುವ ವಿಡಿಯೋವನ್ನು ಠಾಣೆಯಲ್ಲಿರುವ ಕಂಪ್ಯೂಟರ್‍ಗೆ ಡೌನ್‍ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಈ ಕ್ಯಾಮೆರಾ ರಾತ್ರಿಯೂ ಚಿತ್ರೀಕರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ದೊಂಬಿ, ಗಲಾಟೆ, ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡುವಾಗ ಅವರ ಮುಖ ಚಹರೆ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದರಿಂದ ಆರೋಪಿಗಳ ಬಂಧನಕ್ಕೂ ಸಹಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.