ಜಿಲ್ಲಾ ಸುದ್ದಿ

ಬರ್ನಾಡ್ ಮೋರಸ್ ರನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಕ್ಷಮೆಯಾಚಿಸಬೇಕು: ಅಬ್ರಹಾಂ

Mainashree

ಬೆಂಗಳೂರು: ಆರ್ಚ್ ಬಿಷಪ್ ಡಾ.ಬರ್ನಾಡ್ ಮೋರಸ್ ಅವರನ್ನು ಏಕವಚನದಲ್ಲಿ ಸಂಭೋಧಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರು ಕೂಡಲೇ ಬರ್ನಾಡ್ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಇಂಡಿಯನ್ ಕ್ರಿಶ್ಚಿಯನ್ ಯುನೈಟೆಡ್ ಫೋರಂ ನ ಅಧ್ಯಕ್ಷ ಅಬ್ರಹಾಂ ಟಿ.ಜೆ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗೌಡರು ಕರ್ನಾಟಕ ಕನ್ನಡ ಧರ್ಮಗುರುಗಳ ಬಳಗವು ನಡೆಸಿದ ಚಿಂತನಾ ಸಭೆಯಲ್ಲಿ ಬರ್ನಾಡ್ ಮೋರಸ್ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಕನ್ನಡದ ನೆಲಕ್ಕೆ ಬರ್ನಾಡ್ ಮೋರಸ್ ದ್ರೋಹ ಬಗೆಯುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ನಾರಾಯಣ ಗೌಡರು ಹೇಳಿದ್ದಾರೆ.

ಈ ರೀತಿ ಏಕವಚನದಲ್ಲಿ ಮಾತನಾಡುವ ನಾರಾಯಣಗೌಡ ಕೆಳಮಟ್ಟದ ಶೈಲಿ ಹೊಂದಿದ್ದಾರೆ. ಇಂತಹವರು ನಮ್ಮ ಧರ್ಮಗುರುಗಳ ಬಗ್ಗೆ ಏಕವಚನದಲ್ಲಿ ಮಾತಾಡಿರುವುದು ಸರಿಯಲ್ಲ. ಕೂಡಲೇ ಅವರು ಸಾರ್ವಜನಿಕವಾಗಿ ಬರ್ನಾಡ್ ಮೋರಸ್ ಅವರನ್ನು ಕ್ಷಮೆಯಾಚಿಸಬೇಕು. ಇಲ್ಲವಾದರೇ, ಅವರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಸುತ್ತೋಲೆ ಬಗ್ಗೆ ಪುಂಡಲೀಕ ಟೀಕೆ ಸರಿಯಲ್ಲ ಬರ್ನಾಡ್ ಮೋರಸ್ ಹೊರಡಿಸಿರುವ ಸುತ್ತೋಲೆ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಟೀಕಿಸಿರುವುದು ಸರಿಯಲ್ಲ. ಸುತ್ತೋಲೆಯಲ್ಲಿ ಏನಿದೆ ಎಂಬುದನ್ನು ತಿಳಿಯದೇ, ಸುತ್ತೋಲೆ ಬಗ್ಗೆ ಟೀಕಿಸಿದ್ದಾರೆ. ನಾರಾಯಣ ಗೌಡರು ಬರೆದುಕೊಟ್ಟಂತೆ ಪುಂಡಲೀಕ ಹಾಲಂಬಿ ಹೇಳಿಕೆ ನೀಡಿದ್ದಾರೆ. ಹಾಲಂಬಿ ಅವರ ಈ ನಡೆ ಸರಿಯಲ್ಲ. ಬರ್ನಾಡ್ ಮೋರಸ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕು ಹಾಲಂಬಿ ಅವರಿಗೆ ಇಲ್ಲ ಎಂದು ಅಬ್ರಹಾಂ ಟಿ.ಜೆ ಹೇಳಿದ್ದಾರೆ.

SCROLL FOR NEXT