ಬೆಂಗಳೂರು: ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್ ವಿರುದ್ಧ ಪೂರ್ವ ವಿಭಾಗದ ಕಂದಾಯಾಧಿಕಾರಿಗಳು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ.
ಶಾಂತಲಾನಗರ ವಾರ್ಡ್ ನಲ್ಲಿ ಜಾಹೀರಾತು ಫಲಕಗಳಿಂದ ರು.4 ಕೋಟಿ ತೆರಿಗೆ ವಸೂಲಿ ಮಾಡುವ ವಿಶೇಷ ಕಾರ್ಯಾಚರಣೆಯನ್ನು ಕೆ.ಮಥಾಯ್ ಆರಂಭಿಸಿದ್ದರು. ಇದಕ್ಕಾಗಿ ಪೂರ್ವ ವಲಯದ ಕಂದಾಯಾಧಿಕಾರಿಗಳಾದ ಜಿ.ವಿ.ನಾಗರಾಜು, ಎಸ್.ನರಸಿಂಹಮೂರ್ತಿ, ಎನ್.ನರಸಿಂಹ ಅವರಿಗೆ ತೆರಿಗೆ ವಸೂಲಿ ಮಾಡಲು ಸೂಚಿಸಲಾಗಿತ್ತು. ಆದರೆ, ಅಧಿಕಾರಿ ಮಥಾಯ್ ಅವರು ಅಸಭ್ಯವಾಗಿ ಮಾತನಾಡುತ್ತಿದ್ದು, ನಮ್ಮನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಬೇಕು ಎಂದು ಮೂವರು ಕಂದಾಯಾಧಿಕಾರಿಗಳು ದೂರು ನೀಡಿದ್ದಾರೆ.
ನಿಂದನೆ, ಬೆದರಿಕೆ ಆರೋಪ
ವಿಶೇಷ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದರಿಂದ ಸಹಾಯಕ ಆಯುಕ್ತರ ಕಚೇರಿಗೆ ಹೋಗಿ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಲಾಗಿತ್ತು. ಆದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಾಹಾಯಕ ಆಯುಕ್ತರು, ಕಚೇರಿಯಿಂದ ಹೊರ ಹೋಗುವಂತೆ ಹೇಳಿದ್ದರು. ನಂತರ ನಿಗದಿತ ಅವಧಿಯಲ್ಲಿ ತೆರಿಗೆ ವಸೂಲಿ ಮಾಡದಿದ್ದರೆ ಬಿಎಂಟಿಎಫ್ ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಬಿಬಿಎಂಪಿಯಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅಧಿಕಾರಿ ಮಥಾಯ್ ಅಸಭ್ಯವಾಗಿ ಮಾತನಾಡುತ್ತಿರುವುದರಿಂದ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಲು ಕಷ್ಟವಾಗಿದೆ. ಹೀಗಾಗಿ ಬೇರೆ ಕಚೇರಿಗೆ ವರ್ಗಾಯಿಸಬೇಕು ಹಾಗೂ ಸಹಾಯಕ ಆಯುಕ್ತ ಮಥಾಯ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.