ಬೆಂಗಳೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆಸ್ಥಾನ ನೀಡುವುದೂ ಸೇರಿದಂತೆ ಪಂಚಾಯಿತಿಗಳಿಗೆ ಹೆಚ್ಚು ಅಧಿಕಾರ ನೀಡುವ ವಿಚಾರ ನ.5ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಮಾಜಿ ಸ್ಪೀಕರ್ ರಮೇಶ್‍ಕುಮಾರ್ ನೇತೃತ್ವದ ಸಮಿತಿ ವರದಿ ಶಿಫಾರಸುಗಳ ಪ್ರಕಾರ ಪಂಚಾಯತ್ ರಾಜ್ ಕಾಯ್ದೆಯಲ್ಲಿ 88 ವಿಷಯಗಳನ್ನು ಬದಲಿಸಬೇಕಿದೆ.
ಇದರೊಂದಿಗೆ ನನ್ನ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸಲಹೆಯಂತೆ ಅನೇಕ ಹೊಸ ವಿಚಾರಗಳನ್ನು ಸೇರಿಸಬೇಕಿದೆ. ಆದ್ದರಿಂದ ಎಲ್ಲ ಬದಲಾದ ವಿಚಾರಗಳನ್ನು ಸಂಪುಟದಲ್ಲಿ ಚರ್ಚಿಸಲಾಗುತ್ತದೆ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಕಾಯ್ದೆಗೆ ಸಮಗ್ರ ತಿದ್ದುಪಡಿ ತರುವ ಮಸೂದೆಯನ್ನು ನ.16ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲೇ ಮಂಡಿಸಲಾಗುತ್ತದೆ. ಪಂಚಾಯತ್ ವ್ಯವಸ್ಥೆ ಬಲಪಡಿಸುವುದಕ್ಕೆ ಅಗತ್ಯ ಕ್ರಮಕೈಗೊಂಡಿದೆ ಎಂದರು.