ಬೆಂಗಳೂರು: ಮೂಡುಬಿದಿರೆಯಲ್ಲಿ ನವೆಂಬರ್ ೨೬ ರಿಂದ ೨೯ ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಿಂದ ಪ್ರಗತಿಪರ ಚಿಂತಕ, ಬರಹಗಾರ ಬಂಜಗೆರೆ ಜಯಪ್ರಕಾಶ್ ಹಿಂದೆ ಸರಿಸಿದ್ದಾರೆ.
ಹಲವಾರು ಪ್ರಗತಿಪರ ಯುವ ಲೇಖಕರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮತ್ತು ಖ್ಯಾತ ಕಾದಂಬರಿಕಾರ ಕುಂ ವೀರಭದ್ರಪ್ಪ ಅವರಿಗೆ ಈ ಜಾತ್ರೆಯಿಂದ ಹಿಂದೆ ಸರಿಯುವಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು. ಆ ಕಾರ್ಯಕ್ರಮದ ಆಯೋಜಕ ಮೋಹನ್ ಆಳ್ವಾ ಅವರಿಗೆ ವಿಶ್ವ ಹಿಂದೂ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವಿದ್ದು, ವಿ ಎಚ್ ಪಿ ದಕ್ಷಿಣ ಕನ್ನಡ ಮತ್ತು ರಾಜ್ಯಾದ್ಯಂತ ಕೋಮು ದಳ್ಳುರಿಗೆ ಕಾರಣವಾಗಿದೆ ಎಂದು ದೂರಿ ಕಾರ್ಯಕ್ರಮದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಬಂಜಗೆರೆ ಜಯಪ್ರಕಾಶ್, ಹಿನ್ನಲೆ ಗೊತ್ತಿಲ್ಲದೆ ಒಪ್ಪಿಕೊಂಡಿದ್ದೆ ಆದರೆ ಈಗ ಅಲ್ಲಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಮತ್ತೊಬ್ಬ ಮಹತ್ವದ ಲೇಖಕ ಕುಂವಿ, ಪ್ರತಿಭಟನೆಗಾಗಿ ಆ ವೇದಿಕೆ ಬಳಸಿಕೊಳ್ಳುವುದು ಸೂಕ್ತ ಆದುದರಿಂದ ನುಡಿಸಿರಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸಾಹಿತಿ ಯು ಆರ್ ಅನಂತಮೂರ್ತಿ, ದಲಿತ ಕವಿ ಸಿದ್ಧಲಿಂಗಯ್ಯ ಮತ್ತು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗವಹಿಸುವಾಗಲೂ ಈ ರೀತಿಯ ವಿರೋಧ ಕೇಳಿಬಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.