ಬೆಂಗಳೂರು: ದೇಶದಲ್ಲಿ ಧರ್ಮದ ಆಧಾರದಲ್ಲಿ ರಾಜಕಾರಣ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಅವಮಾನಿಸಲಾಗುತ್ತಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಹೇಳಿದ್ದಾರೆ.
ಕರ್ನಾಟಕ ರಿಪಬ್ಲಿಕ್ ಸೇನೆ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ `ಹಸಿವು, ಅವಮಾನ, ಅಸ್ಪೃಶ್ಯತೆ ಮುಕ್ತ ನಿರ್ಮಾಣಕ್ಕಾಗಿ ರಿಪಬ್ಲಿಕ್ ಸೇನೆ' ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು, ದೇಶದ ಜನತೆ ರಾಜಕೀಯ, ಸಾಮಾಜಿಕ ,ಆರ್ಥಿಕವಾಗಿ ಸಮಾನರಾಗಬೇಕೆಂಬ ಉದ್ದೇಶದಿಂದ ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ವೈದಿಕ ಸಿದ್ಧಾಂತವಾಗಿ ರೂಪುಗೊಂಡಿರುವ ಬಿಜೆಪಿ, ಕೇಂದ್ರದಲ್ಲಿ ಸಂಘ ಪರಿವಾರದ ನೀತಿಗಳನ್ನು ಜಾರಿ ಮಾಡಿ, ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ ಎಂದರು.
ದೇಶದಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ, ಪ್ರಧಾನಿ ನರೇಂದ್ರ ಮೋದಿ ವಿದೇಶ ಸುತ್ತುತ್ತಿದ್ದಾರೆ. ಅವರಿಗೆ ವಿದೇಶಿ ಬಂಡವಾಳಶಾಹಿಗಳ ಕೊಳ್ಳುಬಾಕತನ ಹಿತವಾಗಿದೆ. ದೇಶದಲ್ಲಿ ಶೇ.85ಮಂದಿ ದುಡಿಯುವ ಕಾರ್ಮಿಕರಿದ್ದಾರೆ. ಶೇಕಡಾ
15ರಷ್ಟಿರುವ ಮಂದಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಜಾಗೃತಿಗೊಂಡು ಒಟ್ಟಾಗಬೇಕಿದೆ ಎಂದರು. ಬಸವಣ್ಣ, ಟಿಪ್ಪು ಸುಲ್ತಾನ್, ಕುವೆಂಪು ಸೇರಿದಂತೆ ಸಮಾನತೆ ಆಶಯವುಳ್ಳ ಹಲವು ಮಂದಿ ಜನ್ಮ ತಾಳಿದ್ದಾರೆ. ಆದರೆ ಇವರ ಆಶಯಗಳನ್ನು ಜಾರಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹಾಗಾಗಿ ಜನತೆ ಪರ್ಯಾಯ ರಾಜಕೀಯ ಪಕ್ಷಗಳತ್ತ ಮುಖ ಮಾಡಬೇಕೆಂದು ಅವರು ಸಲಹೆ ನೀಡಿದರು.