ಜಿಲ್ಲಾ ಸುದ್ದಿ

ವಿಶ್ವದಾಖಲೆ ಸೇರಿದ ಸೇನೆ ಬೈಕ್ ರೈಡಿಂಗ್

Manjula VN

ಬೆಂಗಳೂರು: ಮೈ ಜುಮ್ಮೆನಿಸುವ, ರೋಮಾಂಚನಗೊಳಿಸುವ ಸಾಹಸಗಳು, ಎದೆ ಝಲ್ಲೆನಿಸುವ, ಉಸಿರುಗಟ್ಟಿ ಕುಳಿತು ಆಶ್ಚರ್ಯದಿಂದ ನೋಡುವ ಕಣ್ಣುಗಳು, ವಾಹ್ ಎನ್ನುವ ಉದ್ಗಾರಗಳು, ಜಯಘೋಷ ಧೈರ್ಯ ಮತ್ತು ಸಾಹಸಕ್ಕೆ ಹೆಸರಾದ ಭಾರತೀಯ ಸೈನ್ಯದ ಟೊರ್ನಾಡೋಸ್ ತಂಡ ಭಾನುವಾರ ಇಲ್ಲಿಯ ನೈಸ್ ರಸ್ತೆಯಲ್ಲಿ ಪ್ರದರ್ಶಿಸಿದ ವಿಶ್ವ ದಾಖಲೆಯ ಬೈಕ್ ರ್ಯಾಲಿಯಲ್ಲಿ ಕಂಡ ದೃಶ್ಯಗಳಿವು. ಭೂಸೇನೆಯ ಬೈಕ್ ಸಾಹಸಿಗಳ ಕಸರತ್ತು ಎಲ್ಲರನ್ನು ಒಂದು ಕ್ಷಣ ಬೆರಗುಗೊಳಿಸಿತು.

ಮಾತ್ರವಲ್ಲ ಹೊಸ ವಿಶ್ವದಾಖಲೆಗಳನ್ನು ಬರೆಯುವ ಮೂಲಕ ಭಾರತೀಯ ಸೇನೆ ಬೈಕ್ ರೈಡಿಂಗ್ ವಿಭಾಗಗಳಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿತು. ವಿವಿಧ ಮಾದರಿಯ ಆರು ವಿಭಾಗಗಳಲ್ಲಿ ಟೊರ್ನಾಡೋಸ್ ತಂಡ ಸಾಹಸ ಪ್ರದರ್ಶಿಸಿತು. ಬೈಕಿನ ಮುಂಭಾಗದ ಮಡ್‍ಗಾರ್ಡ್ ಮೇಲೆ ಕುಳಿತು ಬೈಕಿನ ಹ್ಯಾಂಡಲ್ ಹಿಡಿಯದೆ ಬರೋಬ್ಬರಿ 19 ಕಿಮೀ ದೂರವನ್ನು ಕೇವಲ 39.40 ನಿಮಿಷದಲ್ಲಿ ಎನ್. ಕೆ. ರೂಪ್ನರ್ ಕ್ರಮಿಸಿದರು. ಅದೇ ರೀತಿ ಶಶಿ ರಾಜಾ ಯಾವುದೇ ಆಸರೆಯಿಲ್ಲದೆ ಬೈಕ್ ಮೇಲೆ ನಿಂತು 19 ಕಿಮೀ ದೂರವನ್ನು 18.40 ನಿಮಿಷದಲ್ಲಿ ಗುರಿ ಮುಟ್ಟಿದ್ದು ಸಹ ರೋಮಾಂಚನಗೊಳಿಸುವ ದೃಶ್ಯವಾಗಿತ್ತು.

ಬೈಕಿನ ಮೇಲೆ ಅಂಗಾತ ಮಲಗಿ ರೈಡ್ ಮಾಡಿದ ಶೆವಾಲೆ ರವೀಂದ್ರ 19 ಕಿಮೀ ದೂರವನ್ನು 24.16 ನಿಮಿಷಗಳಲ್ಲಿ ತಲುಪಿದರೆ, ಬೈಕ್ ಸೀಟಿನ ಮೇಲೆ ತನ್ನ ಮಂಡಿಯಿಂದಲೇ ಬ್ಯಾಲೆನ್ಸ್ ಮಾಡಿ ಕುಳಿತು ಬರೋಬ್ಬರಿ 19 ಕಿಮೀ ರೈಡ್ ಮಾಡಿದ್ದು ಚಕಿತಗೊಳಿಸಿತು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಮತ್ತೊಂದು ಸಾಹಸ ನಂಬಲಸಾಧ್ಯವಾಗಿತ್ತು.

ಆರ್. ತಿರುಮಲನ್ ಮತ್ತು ರಾಂಪಾಲ್ ಯಾದವ್ ನೇತೃತ್ವದ ತಂಡ ಕೇವಲ ಮೂರು ಬೈಕ್‍ಗಳಲ್ಲಿ ಬರೋಬ್ಬರಿ 32 ಜನ ಒಂದು ಕಿಮೀ ದೂರವನ್ನು ಕೇವಲ 56.23 ಸೆಕೆಂಡ್‍ಗಳಲ್ಲಿ ಕ್ರಮಿಸಿ ಪ್ರಶಂಸೆಗೆ ಪಾತ್ರವಾದರು. ಇದೇ ತಂಡ ಕೇವಲ ಎರಡು ಬೈಕಿನಲ್ಲಿ 15 ಜನ ಒಂದು ಕಿಮೀ ದೂರವನ್ನು 48.72 ಸೆಕೆಂಡ್‍ಗಳಲ್ಲಿ ಗುರಿ ತಲುಪಿದ್ದು ಮರೆಯಲಾರದ ಗಳಿಗೆಯಾಗಿತ್ತು. ರೈಡಿಂಗ್‍ನ ನಂತರ ಪಾಲ್ಗೊಂಡಿದ್ದ ತಂಡಕ್ಕೆ ಬಹುಮಾನ ವಿತರಿಸಿ ಗೌರವಿಸಲಾಯಿತು.

SCROLL FOR NEXT