ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನಂಬರ್ ಕ್ರೇಜ್ ಹೆಚ್ಚುತ್ತಿದೆ. ಲಕ್ಷಾಂತರ ರುಪಾಯಿ ಕೊಟ್ಟು ಮೊಬೈಲ್, ವಾಹನಗಳಿಗೆ ಫ್ಯಾನ್ಸಿ ಸಂಖ್ಯೆ ಪಡೆಯಲಾಗುತ್ತಿದೆ.
ಸಾರಿಗೆ ಇಲಾಖೆ (ಆರ್‍ಟಿಒ) ನಡೆಸಿದ ಬಹಿರಂಗ ಹರಾಜಿನಲ್ಲಿ `9' ಸಂಖ್ಯೆಯು ಅತಿ ಹೆಚ್ಚು ರು.2.76 ಲಕ್ಷ ಬೆಲೆಗೆ ಮಾರಾಟವಾಗಿದೆ. ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಕೆಎ-03/ಎಂವೈ ನೋಂದಣಿ ಸಂಖ್ಯೆಯ ಬಹಿರಂಗ ಹರಾಜಿನಲ್ಲಿ ಉದ್ಯಮಿ ಬಿ. ಮಿಥುನ್‍ರೆಡ್ಡಿ ಎಂಬುವರು ನಂಬರ್ `9' ಸಂಖ್ಯೆಯನ್ನು ರು.2.76 ಲಕ್ಷಕ್ಕೆ ಹರಾಜು ಕೂಗಿ ಖರೀದಿಸಿದರು. 999 ಫ್ಯಾನ್ಸಿ ನಂಬರ್‍ಗೆ ಮಂಗಳೂರು ಪ್ರಾಡಕ್ಟ್ ಕಂಪನಿಯು ರು.2.52 ಲಕ್ಷಕ್ಕೆ ಬಿಡ್‍ನಲ್ಲಿ ಪಡೆದುಕೊಂಡಿತು. ಇದು ಹರಾಜಿನಲ್ಲಿ ಎರಡನೇ ಅತಿ ಹೆಚ್ಚು ದುಬಾರಿಗೆ ಮಾರಾಟವಾದ ಸಂಖ್ಯೆ.
0001 ಸಂಖ್ಯೆಯನ್ನು ಆರ್ ಚಿಲ್ಡ್ ನೆಟ್‍ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ರು.2.50 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದೆ. ಇದು ಬಿಡ್‍ನಲ್ಲೇ ಮೂರನೇ ದುಬಾರಿ ಮಾರಾಟವಾಗಿದೆ. ಹರಾಜಿನಲ್ಲಿ 9999 ನೋಂದಣಿ ಸಂಖ್ಯೆಯು ರು.50 ಸಾವಿರಕ್ಕೆ ಮಾರಾಟವಾದರೆ, 99 ಸಂಖ್ಯೆಯು ರು.32 ಸಾವಿರ, 1234 ನೋಂದಣಿ ಸಂಖ್ಯೆಗೆ ರು.5 ಸಾವಿರಕ್ಕೆ ಮಾರಾಟವಾಯಿತು.
ರಸ್ತೆ ಸುರಕ್ಷತೆ ಮತ್ತು ಸಾರಿಗೆ ಆಯುಕ್ತ ಡಾ. ರಾಮೇಗೌಡ ಮಾತನಾಡಿ, ಸಾರಿಗ ಇಲಾಖೆಯ ನಾಲ್ಕನೇ ಬಾರಿ ಹರಾಜಿನ ಮೂಲಕ ಫ್ಯಾನ್ಸಿ ಸಂಖ್ಯೆಯನ್ನು ನೀಡುತ್ತಿದೆ. ಮಂಗಳವಾರ ನಡೆದ ಹರಾಜಿನಲ್ಲಿ ರು.8.74 ಲಕ್ಷ ಬಿಡ್ ಕೂಗಲಾಗಿದೆ. ಇಂದಿನ ಹರಾಜಿನಲ್ಲಿ ಪ್ರವೇಶ ಶುಲ್ಕ ರು.75 ಸಾವಿರ ಸೇರಿಸಿ ಒಟ್ಟು ರು.19.99 ಲಕ್ಷ ಸಂಗ್ರಹವಾಗಿದೆ. ಮೊದಲನೇ ಬಾರಿ ಹರಾಜಿನಲ್ಲಿ ರು.1.80 ಲಕ್ಷ, 2ನೇ ಹರಾಜಿನಲ್ಲಿ ರು.3.36ಲಕ್ಷ, 3ನೇ ಹರಾಜಿನಲ್ಲಿ ರು.8.20 ಲಕ್ಷ ಫ್ಯಾನ್ಸಿ ನಂಬರ್ ಗಳು ಬಿಡ್ ನಲ್ಲಿ ಮಾರಾಟವಾಗಿದ್ದವು. ಹರಾಜಿನಲ್ಲಿ ಫ್ಯಾನ್ಸಿ ನಂಬರ್ ಗಳನ್ನು ಪಡೆಯುವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಫ್ಯಾನ್ಸಿ ಸಂಖ್ಯೆಗಳ ಹರಾಜು ನಡೆಸಲುಚಿಂತಿಸಲಾಗುತ್ತಿದೆ ಎಂದು ಹೇಳಿದರು.