ಜಿಲ್ಲಾ ಸುದ್ದಿ

ಯಕ್ಷಗಾನಕ್ಕೂ ಮೊಬೈಲ್ ಆಪ್!

Srinivas Rao BV

ಬೆಂಗಳೂರು: ಇನ್ನು ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ. ಇದಕ್ಕಾಗಿಯೇ ರವಿ ಮಡೋಡಿ, ಆದಿತ್ಯ ಪ್ರಸಾದ ಮತ್ತು ರವೀಂದ್ರ ದೊಂಗಡೆ ಎಂಬ ಬೆಂಗಳೂರಿನ ಮೂವರು ಸೇರಿ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿಗಾಗಿ ಒಂದು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಪ್ರಸ್ತುತ ಲಭ್ಯವಿರುವ ಆ್ಯಂಡ್ರಾಯ್ಡ್ ಆವೃತ್ತಿಯ ಬೀಟಾ ವರ್ಷನ್‍ದಿಂದ ಮುಂದೆ ನಡೆಯಲಿರುವ ಯಕ್ಷಗಾನ ಕಾರ್ಯಕ್ರಮಗಳ ವಿವರಗಳನ್ನು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಹೆಚ್ಚು ಹೆಚ್ಚು ಆಸಕ್ತರನ್ನು ಯಕ್ಷಗಾನಕ್ಕೆ ಸೆಳೆಯುವಂತೆ ಮಾಡುವುದು ಈ ಆ್ಯಪ್ ಮೂಲ ಉದ್ದೇಶವಾಗಿದೆ. ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 10 ಸಾವಿರಕ್ಕೂ ಅಧಿಕ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಧರ್ಮಸ್ಥಳ, ಕಟೀಲು, ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿಮೊದಲಾದ 30 ಕ್ಕೂ ಹೆಚ್ಚು ವೃತ್ತಿ ಮೇಳಗಳು 100 ಕ್ಕೂ ಹೆಚ್ಚು ಹವ್ಯಾಸಿ ಯಕ್ಷಗಾನ ತಂಡಗಳು ಪ್ರದರ್ಶನ ನೀಡುತ್ತವೆ.

ಕೇವಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ , ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಮುಂಬೈ ಮೊದಲಾದೆಡೆಯೂ ನೂರಾರು ಪ್ರದರ್ಶನಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲೇ 30 ಕ್ಕೂ ಹವ್ಯಾಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಈ ಎಲ್ಲಾ ಪ್ರದರ್ಶನಗಳ ಕುರಿತಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವ ಯಾವುದೇ ವಿಧಾನ ಇದುವರೆಗೆ ಇರಲಿಲ್ಲ. ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಸಿಗುತ್ತಿದ್ದ ಬಿಡಿ ಬಿಡಿಯಾದ ಮಾಹಿತಿ ಎಲ್ಲರಿಗೂ ದೊರಕುವಂತಿರಲಿಲ್ಲ. ಈ ಆಪ್ ಮೂಲಕ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡುವುದುದು ಇದರ ಮತ್ತೊಂದು ಉದ್ದೇಶವಾಗಿದೆ.

SCROLL FOR NEXT