ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಪ್ರಭಾವಿ ಗುತ್ತಿಗೆದಾರರಿಗೆ ರು.179 ಕೋಟಿ ರೂ. ಬಾಕಿ ಪಾವತಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಿರಿತನದ ಆಧಾರದ ಮೇಲೆ ಗುತ್ತಿಗೆದಾರರ ಬಾಕಿ ಪಾವತಿಸಬೇಕೆಂದು ಹೈಕೋರ್ಟ್ ಸೂಚಿಸಿದೆ. ಆದರೆ, ಇದನ್ನು ಉಲ್ಲಂಘಿಸಿರುವ ಅಧಿಕಾರಿಗಳು ಪ್ರಭಾವಿ ಗುತ್ತಿಗೆದಾರರಿಗೆ ಪಾವತಿಸಿದ್ದಾರೆ. ಇದರಲ್ಲಿ ಪಾಲಿಕೆ ಆಯುಕ್ತರು ಹಾಗೂ ಮುಖ್ಯ ಲೆಕ್ಕಾಧಿಕಾರಗಳ ಪಾತ್ರವಿದೆ. ಕೂಡಲೇ ಇವರ ವಿರುದ್ಧ ಮುಖ್ಯಮಂತ್ರಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ
ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜರಾಜೇಶ್ವರಿನಗರ, ಕೆ.ಆರ್.ಪುರಂ, ಯಶವಂತಪುರ ಕ್ಷೇತ್ರದ ಕಾಮಗಾರಿಗಳು ಹಾಗೂ ಪ್ರಭಾವಿ ಗುತ್ತಿಗೆದಾರರಿಗೆ ಮಾತ್ರ ಬಾಕಿ ಪಾವತಿಸಿದ್ದಾರೆ. ಇದರಿಂದ ಬಡ ಗುತ್ತಿಗೆದಾರರನ್ನು ಕಡೆಗಣಿಸಿದಂತಾಗಿದೆ. ಬಾಕಿ ಪಾವತಿಗೆ ಗುತ್ತಿಗೆದಾರರಿಂದ ಶೇ.8 ರಿಂದ 10ರಷ್ಟು ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.