ಬೆಳಗಾವಿ : ಗಣೇಶ ವಿಸರ್ಜನಾ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತಾಗಿ ನಡೆಯುತ್ತಿದ್ದ ಅಲ್ಪಸಂಖ್ಯಾತ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾಜಿ ಹಾಗೂ ಹಾಲಿ ಕಾರ್ಪೋರೇಟರ್ ಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಸಮ್ಮುಖದಲ್ಲೇ ಹಾಲಿ ಕಾರ್ಪೋರೇಟರ್ ಮತ್ತು ಮಾಜಿ ಕಾರ್ಪೋರೇಟರ್ ನಡುವೆ ಮಾರಾಮಾರಿ ನಡೆದಿದೆ. ಚರ್ಚೆ ನಡೆಯುತ್ತಿದ್ದ ವೇಳೆ ಮಾಜಿ ಕಾರ್ಪೋರೇಟರ್ ಫಿರ್ಕೋಸ್ ಮತ್ತು ಹಾಲಿ ಕಾರ್ಪೋರೇಟರ್ ಮತೀನ್ ಶೇಖ್ ಅಲಿ ಅವರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಇಬ್ಬರ ಬೆಂಬಲಿಗರು ಹೊಡೆದಾಟ ನಡೆಸಿದ್ದು ,ಸಿ.ಎಂ.ಇಬ್ರಾಹಿಂ ಅವರು ಗಲಾಟೆ ನಡೆಸದಂತೆ ಮನವಿ ಮಾಡಿದರಾದರೂ ಹೊಡೆದಾಟ ಮುಂದುವರಿದೇ ಇತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದೇ ಸಿಎಂ. ಇಬ್ರಾಹಿಂ ಮೂಕ ಪ್ರೇಕ್ಷಕಾರಾದರು.