ಬೆಂಗಳೂರು: ಮಾಗಡಿಯ ಕೆಂಪಾಪುರದಲ್ಲಿ ಪತ್ತೆಯಾಗಿರುವ ಕೆಂಪೇಗೌಡರ ಐಕ್ಯ ಸ್ಥಳವನ್ನು ಪುನರುಜ್ಜೀವನಗೊಳಿಸಿ ಸಂರಕ್ಷಿಸಲಾಗುವುದು ಎಂದು ಮೇಯರ್ ಮಂಜುನಾಥರೆಡ್ಡಿ ತಿಳಿಸಿದ್ದಾರೆ.
ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಬೇಕೆಂದು ಬಿಜೆಪಿ ಮುಖಂಡ ಎ.ಎಚ್. ಬಸವರಾಜು ಹಾಗೂ ಬನಶಂಕರಿ ಸಾಮೂಹಿಕ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು. ಕೆಂಪೇಗೌಡರು ಐಕ್ಯವಾದ ಸ್ಥಳ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕೆಂಪೇಗೌಡರ ಸಮಾಧಿ ಸ್ಥಳದಲ್ಲಿರುವ ಗೋಪುರ, ಬೆಂಗಳೂರಿನಲ್ಲಿ ಅವರು ನಿರ್ಮಿಸಿದ ನಾಲ್ಕು ಗೋಪುರಗಳ ಮಾದರಿಯಲ್ಲೇ ಇದೆ. ಸಮಾಧಿ ಸ್ಥಳದಲ್ಲಿರುವ ಕೆತ್ತನೆ, ಲಿಪಿಗಳನ್ನು ಮತ್ತಷ್ಟು ಸಂಶೋಧನೆಗೆ ಒಳಪಡಿಸಬೇಕಿದೆ. ಸೋಮವಾರ ಅಧಿಕಾರಿಗಳನ್ನು ಕೆಂಪಾಪುರ ಗ್ರಾಮಕ್ಕೆ ಕಳುಹಿಸಿ ವರದಿ ದಾಖಲಿಸಲಾಗುವುದು ಎಂದರು.
ನಗರದ ಐತಿಹಾಸಿಕ ಸ್ಥಳಗಳನ್ನು ಅಧ್ಯಯನ ಮಾಡಲು ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಅಧ್ಯಯನ ಸಮಿತಿಯಿದೆ. ಈ ಸಮಿತಿ ಸದಸ್ಯರನ್ನು ಕೆಂಪಾಪುರಕ್ಕೆ ಕಳುಹಿಸಿ ಅಧ್ಯಯನ ಮಾಡಲಾಗುವುದು. ಸ್ಥಳೀಯರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಇಲ್ಲಿನ ಶಿಥಿಲವಾಗಿರುವ ಗೋಪುರವನ್ನು ನೂತನವಾಗಿ ನಿರ್ಮಿಸಿ ಕೆಂಪೇಗೌಡರ ಹೆಸರನ್ನು ಶಾಶ್ವತವಾಗಿ ಉಳಿಸಲಾಗುವುದು ಎಂದರು. ರಾಜ್‍ಘಾಟ್ ಮಾದರಿ ಅಗತ್ಯ: ಕೆಂಪಾಪುರ ಗ್ರಾಮವನ್ನು ದತ್ತು ಪಡೆದು ರಾಜ್‍ಘಾಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಬಿಜೆಪಿ ಮುಖಂಡ .ಎಚ್.ಬಸವರಾಜು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ತಾಲೂಕು, ತಿಪ್ಪಸಂದ್ರ ಹೋಬಳಿ, ಚಿಕ್ಕಮುದುಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಐಕ್ಯ ಸ್ಥಳ ಪತ್ತೆಯಾಗಿದೆ. 16ನೇ ಶತಮಾನದಲ್ಲಿ ಹಿರಿಯ ಕೆಂಪೇಗೌಡರು ಹಲವು ಕಡೆ ಯುದ್ಧ ಮಾಡಿದ ನಂತರ ಕೆಂಪಾಪುರಕ್ಕೆ ಬಂದು ಐಕ್ಯವಾದರು ಎಂಬುದಕ್ಕೆ ಇಲ್ಲಿನ ಗೋಪುರ ದಾಖಲೆಯಾಗಿ ಉಳಿದಿದೆ. ಗೋಪುರದಲ್ಲಿ ಅಶ್ವಾರೂಢ ಕೆಂಪೇಗೌಡ ಚಿತ್ರವಿದ್ದು, ನಿತ್ಯವೂ ಸ್ಥಳೀಯರಿಂದ ಪೂಜಿಸಲ್ಪಡುತ್ತಿದೆ. ಮರೂರು ಗ್ರಾಮದ ನಿವಾಸಿ ಪ್ರಶಾಂತ್ ಎಂಬುವರು ಗೋಪುರದ ಬಳಿ ಸ್ವಚ್ಛತಾ ಕಾರ್ಯ ನಡೆಸಿ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಐಕ್ಯ ಸ್ಥಳದ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಇತಿಹಾಸಕಾರರು, ತಜ್ಞರನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲಾ ಗಿದೆ. ನಗರದಲ್ಲಿರುವ ನಾಲ್ಕು ಗೋಪುರಗಳ ಮಾದರಿಯಲ್ಲೇ ಈ ಗೋಪುರವೂ ಇದ್ದು, ಹೆಚ್ಚಿನ ಸಂಶೋಧನೆಯಾಗಬೇಕಾದ ಅಗತ್ಯವಿದೆ. ಗೋಪುರದ ಕುರುಹು ನೋಡಿದರೆ ಇದು ಕೆಂಪೇಗೌಡರ ಐಕ್ಯ ಸ್ಥಳ ಎಂಬುದು ಸ್ಪಷ್ಟವಾಗಿದೆ. ಇಲ್ಲಿ ಕೆಂಪೇಗೌಡರ ಸಮಾಧಿಯ ಮೇಲೆ ಗೋಪುರವಿದ್ದು, ಶಿಥಿಲ ಸ್ಥಿತಿಯಲ್ಲಿದೆ. ಇದನ್ನು ಪುನರ್‍ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಬೇಕು. ಗ್ರಾಮವ ನ್ನು ಪಾಲಿಕೆ ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.