ಜಿಲ್ಲಾ ಸುದ್ದಿ

ವಿದ್ಯಾರ್ಥಿಗಳಿಗಾಗಿ ಸ್ವಾವಲಂಬನ್

Shilpa D

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಘೋಷಿಸಿದ್ದ `ಸ್ವಾವಲಂಬನ್' ಯೋಜನೆಯ ಮಾರ್ಗಸೂಚಿ ಪ್ರಕಟಗೊಂಡಿದೆ.

ವಿದ್ಯಾರ್ಥಿಗಳು ಹೊಸ ಉದ್ದಿಮೆಗಳನ್ನು ಹುಟ್ಟು ಹಾಕಲು ರಾಷ್ಟ್ರೀಕೃತ ಬ್ಯಾಂಕುಗಳಿಂದ ವಾರ್ಷಿಕ 10ಲಕ್ಷ ರೂಪಾಯಿ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮೂರು ವರ್ಷಗಳ ವರಗೆ ರಾಜ್ಯ ಸರ್ಕಾರವೇ  ಭರಿಸುವುದು ಯೋಜನೆಯ ಪ್ರಮುಖಾಂಶ. ಪ್ರಥಮ ಮತ್ತು ದ್ವಿತೀಯ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದು ಮೊದಲನೇ ಬಾರಿಗೆ ತೇರ್ಗಡೆಯಾಗಿರುವ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಈ ಯೋಜನೆ ಅನ್ವಯಿಸಲಿದೆ. ರಾಜ್ಯದ ಯಾವುದೇ ವಿಶ್ವವಿದ್ಯಾಲಯದ ಸಂಯೋಜನೆ ಪಡೆದ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಗಳು ಯಾವ ಉದ್ದಿಮೆ ಪ್ರಾರಂಭಿಸುತ್ತಾರೋ, ಅದರ ಯೋಜನಾ ವರದಿಯನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾಗುತ್ತದೆ ಯೋಜನಾ ವರದಿ ಮತ್ತು ಪ್ರಸ್ತಾವನೆಯನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಸ್ವೀಕರಿಸಿದ ನಂತರ ತಮ್ಮ ಅಭಿಪ್ರಾಯದೊಂದಿಗೆ ಕಾಲೇಜು ಶಿಕ್ಷಣ ಇಲಾಖೆಗೆ ಕಳುಹಿಸುತ್ತಾರೆ.

ಬೆಂಗಳೂರು ನಗರ ಕಾಲೇಜುಗಳಿಂದ ಸಲ್ಲಿಸುವ ಪ್ರಸ್ತಾವನೆಗಳು ಎಫ್ ಕೆಸಿಸಿಐ, ಇತರೆ ಕೈಗಾರಿಕ ಸಂಸ್ಥೆಗಳಿಂದ ಯೋಜನಾ ವರದಿ ದೃಢೀಕರಣಗೊಂಡಿರಬೇಕಾಗುತ್ತದೆ. ಹಾಗೂ ಜಿಲ್ಲಾ ಮಟ್ಟದ ಕಾಲೇಜುಗಳಿಂದ ಸಲ್ಲಿಸುವ ಯೋಜನಾ ವರದಿಗಳು ಜಿಲ್ಲಾ ಕೈಗಾರಿಕಾ ಸಂಸ್ಥೆಗಳಿಂದ ದೃಢೀಕರಣಗೊಳ್ಳ ಬೇಕು. ಈ ಯೋಜನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದವರನ್ನು ಒಳಗೊಂಡೊಂತೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಮಾಡುವಾಗ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ತಿಳಿಸಿದೆ.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಶಂಕರಪ್ಪನವರು ಈ ಯೋಜನೆ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದು, ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ತಮ್ಮ ಅಧೀನ ಕಚೇರಿಗಳಿಗೆ ಸೂಚಿಸಿದ್ದಾರೆ.

SCROLL FOR NEXT