ಬೆಂಗಳೂರು: ಸಂವಿಧಾನಬದ್ಧ ಸ್ಥಾನದಲ್ಲಿರುವ ಲೋಕಾಯುಕ್ತ ಸಂಸ್ಥೆಯ ಘನತೆ, ಗೌರವ ಹಾಗೂ ಪಾವಿತ್ರ್ಯವನ್ನು ಕಾಪಾಡಲು ನ್ಯಾ. ಭಾಸ್ಕರ್ ರಾವ್ ಅವರನ್ನು ಕೂಡಲೇ ಬಂಧಿಸುವಂತೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ. ವೈ. ಭಾಸ್ಕರ್‍ರಾವ್ ವಿರುದ್ಧ ಎಲ್ಲಾ ಆರೋಪಗಳನ್ನು ಪ್ರಾಥಮಿಕ ವರದಿಯಲ್ಲಿ ನಮೂದಿಸಿ ಅವರನ್ನು ಬಂಧಿಸಬೇಕು .ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡು ಯಾವ ಒತ್ತಡಕ್ಕೂ ಮಣಿಯದೆ ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕು.ಲೋಕಾಯುಕ್ತ ಸಂಸ್ಥೆಯಲ್ಲಿ ಅಶ್ವಿನ್‍ರಾವ್ ಅವರಿಂದ ಅವ್ಯವಹಾರ ಆರಂಭವಾಗಿಲ್ಲ. ಅದು ಭಾಸ್ಕರ್ ರಾವ್ ಅವರಿಂದಲೇ ಆಗಿದೆ. ಈ ಸಂಬಂಧ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ರಾಜ್ಯಪಾಲರು, ವಿಧಾನಸಭಾಧ್ಯಕ್ಷರು, ಸಭಾಪತಿಗಳು, ಮುಖ್ಯಮಂತ್ರಿ ಯವರಿಗೆ ಪತ್ರ ಬರೆದು ಲೋಕಾಯುಕ್ತ ಸಂಸ್ಥೆಯನ್ನು ಉಳಿಸುವಂತೆ ಕೋರಲಾಗಿದೆ ಎಂದರು.
ನ್ಯಾ.ವೈ. ಭಾಸ್ಕರ್‍ರಾವ್ ವಿರುದ್ಧ ಭಾರತೀಯ ದಂಡ ಸಂಹಿತೆ 1860ರ ಸೆಕ್ಷನ್ 109, 120ಬಿ ಹಾಗೂ ಪಿಸಿ ಕಾಯಿದೆ 1988ರ ಸೆಕ್ಷನ್ 13ರ ಅಡಿ ಶಾಮೀಲುದಾರರು ಎಂದು ಕೇಸು ದಾಖಲಿಸಿ ನಿವೃತ್ತ ನ್ಯಾ. ಸಂತೋಷ ಹೆಗ್ಡೆ ಮತ್ತು ಇನ್ನಿತರರಿಂದ ತನಿಖೆ ನಡೆಸುವಂತಾಗಬೇಕು. ಸ್ವತಃ ಭಾಸ್ಕರ್‍ರಾವ್ ಅವರೇ ಸ್ವಯಂ ತನಿಖೆಗೆ ಒಳಗಾಗಬೇಕು. ಅವರು ಲೋಕಾಯುಕ್ತರಾಗಿ ನೇಮಕವಾಗುವ ಮುಂಚೆ ವಕೀಲರ ಸಂಘವು ಸರ್ವಾನುಮತದಿಂದ ಠರಾವು ಹೊರಡಿಸಿ,ಅವರ ಮೇಲಿದ್ದ ಆರೋಪಗಳನ್ನು 3 ಪುಟಗಳಲ್ಲಿ ಅಂದಿನ ರಾಜ್ಯಪಾಲರಿಗೆ ಸಲ್ಲಿಸಿತ್ತು. ಅಷ್ಟಿದ್ದರೂ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಭಾಸ್ಕರ್ ರಾವ್ ಅವರನ್ನೇ ಲೋಕಾಯುಕ್ತ ಹುದ್ದೆಗೆ ನೇಮಿಸಿದರು.ಲೋಕಾಯುಕ್ತರಾಗುವುದಕ್ಕೆ ಲಿಕ್ಕರ್ ಉದ್ಯಮಿಯೊಬ್ಬರು ರಾಜ್ಯಪಾಲರಿಗೆ ಕೋಟ್ಯಾನುಗಟ್ಟಲೆ ಹಣ ನೀಡಿದ್ದರು. ಅದಕ್ಕಾಗಿ ಭಾಸ್ಕರ್‍ರಾವ್ ಆ ಉದ್ಯಮಿಗೆ ಸರ್ಕಾರದ ಜಮೀನನ್ನು ಪಾರ್ಕಿಂಗ್‍ಗಾಗಿ ಬಳಸಲು ಕೊಟ್ಟಿದ್ದಾರೆ ಎಂದು ಹಿರೇಮಠ್ ಗಂಭೀರ ಆರೋಪ ಮಾಡಿದರು.
ಕೆ.ಎಲ್. ಮಂಜುನಾಥ್ ಒಬ್ಬ ಭ್ರಷ್ಟ:
ಹಿರೇಮಠ ಉಪಲೋಕಾಯುಕ್ತ ಹುದ್ದೆಗೆ ಎರಡು ಬಾರಿ ಶಿಫಾರಸ್ಸಾಗಿದ್ದರೂ ರಾಜ್ಯಪಾಲರಿಂದ ವಾಪಸ್ ಬಂದಿರುವ ನ್ಯಾ. ಕೆ.ಎಲ್. ಮಂಜುನಾಥ್ ಓರ್ವ ಭ್ರಷ್ಟ. ಅವರ ವಿರುದ್ಧ 192 ಪುಟಗಳಷ್ಟು ಆರೋಪವಿದೆ. ಆ ವಿಚಾರ ಎತ್ತಿದ್ದಕ್ಕೆ ನಮಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ನಾವು 4 ಪುಟ ಸ್ಪಷ್ಟನೆ ಬರೆದಿದ್ದೇವೆ.ಅವರಿಗೆ ಧೈರ್ಯವಿದ್ದರೆ ಸ್ವಯಂ ಪ್ರೇರಣೆಯಿಂದ ತನಿಖೆಗೆ ಒಳಗಾಗಬೇಕು. ಮಗಳು, ಹೆಂಡತಿ, ಅತ್ತೆ ಹೆಸರಿನಲ್ಲಿ ಮಾಡಿರುವ ಆಸ್ತಿಯನ್ನು ಬಹಿರಂಗಪಡಿಸಿ, ಅದನ್ನು ಸರ್ಕಾರಕ್ಕೆ ವಾಪಸ್ಸು ಮಾಡಬೇಕು. ಕ್ರಿಮಿನಲ್ ತನಿಖೆಗೆ ಒಳಗಾಗ ಬೇಕು. ಇವರ ಹೆಸರನ್ನೇ ಶಿಫಾರಸ್ಸು ಮಾಡಿರುವ ಸಚಿವ ಡಿ.ಕೆ. ಶಿವಕುಮಾರ್‍ಗೆ ನಾಚಿಕೆ ಇಲ್ಲ. ಇಂತಹ ಕೃತ್ಯದಿಂದ ಕಾಂಗ್ರೆಸ್ ಸರ್ಕಾರ ಹಿಂದೆ ಸರಿಯದಿದ್ದರೆ ಜನರೇ ಬೀದಿಗಳಿದು ಹೋರಾಟ ಮಾಡುತ್ತಾರೆ ಎಂದು ಹೀರೇಮಠ್ ಆಕ್ರೋಶ ವ್ಯಕ್ತಪಡಿಸಿದರು.