ಜಿಲ್ಲಾ ಸುದ್ದಿ

ಎಫ್ ಡಿಎ ಮರು ಪರೀಕ್ಷೆಗೆ ವಿದ್ಯಾರ್ಥಿಗಳ ಆಗ್ರಹ

Sumana Upadhyaya

ಬೆಂಗಳೂರು: ಕೆಪಿಎಸ್ಸಿ ನಡೆಸಿದ ಎಫ್ ಡಿಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಯಾಗಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವಂತೆ ವಿದ್ಯಾರ್ಥಿವಲಯದಿಂದ ಒತ್ತಡ ಹೆಚ್ಚಾಗಿದೆ.

ಕಳೆದ ಭಾನುವಾರ ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆಗೂ ಮುನ್ನವೇ ವಾಟ್ಸ್ ಆಪ್ ನಲ್ಲಿ ಪ್ರಶ್ನೆ ಪತ್ರಿಕೆಯ ಪುಟಗಳ ಹಾಗೂ ಕೈಯಲ್ಲಿ ಬರೆದ ಉತ್ತರಗಳು ಹರಿದಾಡಲಾರಂಭಿಸಿದೆ. ಇದರ ಪ್ರಯೋಜನ ಪಡೆದಿದ್ದ ಹಲವು ಅಭ್ಯರ್ಥಿಗಳಿಂದ ಮಾಹಿತಿ ಸೋರಿಕೆಯಾಗಿ ಎಲ್ಲೆಡೆ ಪ್ರಶ್ನೆ ಪತ್ರಿಕೆಗಳು ದೊರಕಿವೆ. ಒಂದಲ್ಲ ಒಂದು ಗೊಂದಲಕ್ಕೆ ಎಡೆ ಮಾಡಿಕೊಡುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ವಿಫಲತೆ ಈ ಪರೀಕ್ಷೆಯಲ್ಲೂ ಎದ್ದು ಕಂಡಿದೆ. ಇದರಿಂದ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹಲವು ವಿದ್ಯಾರ್ಥಿ ಸಂಘಟನೆಗಳು ಮೈಸೂರು, ಶಿವಮೊಗ್ಗ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ನಡೆಸಿವೆ.

ಎಫ್ ಡಿಎ ಪರೀಕ್ಷೆಯ ಬಹಿರಂಗಗೊಳಿಸಿದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ನೈಜ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಬೇಕು. ಬಡ, ಮಧ್ಯಮ ವರ್ಗದ ಅಭ್ಯರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ಈ ಪರೀಕ್ಷೆಗೆ ತಯಾರಾಗಿದ್ದರು. ಆದರೆ, ಈ ರೀತಿ ಭ್ರಷ್ಟರು ಹಣ ಪಡೆದು ಪ್ರಶ್ನೆ ಪತ್ರಿಕೆ ಬಯಲು ಮಾಡುವ ಮೂಲಕ ಪ್ರತಿಭಾವಂತ ಅರ್ಹ  ಅಭ್ಯರ್ಥಿಗಳಿಗೆ ದ್ರೋಹವೆಸಗಿದಂತಾಗಿದೆ. ಹಗರಣದಲ್ಲಿ ಹಲವಾರು ಜನ ಭಾಗಿಯಾಗಿರುವ ಬಗ್ಗೆ ಸಂಶಯವಿದೆ. ಆದ್ದರಿಂದ ಸರ್ಕಾರ ಮರು ಪರೀಕ್ಷೆ ನಡೆಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.

ಪರೀಕ್ಷಾ ಅಕ್ರಮ ಕುರಿತು ಸೂಕ್ತ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದವರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆಯ ಕಾರ್ಯದರ್ಶಿ ಜಯಣ್ಣ ಆಗ್ರಹಿಸಿದ್ದಾರೆ.

ಎಫ್ ಡಿಎ ಪರೀಕ್ಷೆಯ ಸಾಮಾನ್ಯಜ್ಞಾನ ಪತ್ರಿಕೆಯ ಉತ್ತರಗಳು ಬಹಿರಂಗವಾಗಿರುವುದು ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದರಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳು ಹತಾಶಗೊಂಡಿದ್ದಾರೆ. ಈಗ ನಡೆದಿರುವ ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆಗೆ ಆದೇಶ ಹೊರಡಿಸಬೇಕೆಂದು ಕರ್ನಾಟಕ ಶೋಷಿತರ ರಕ್ಷಣಾ ವೇದಿಕೆಯ ಅಧ್ಯಕ್ಷ ಎಲ್.ಎನ್. ಹನುಮಂತರಾಯಪ್ಪ,ಕಾರ್ಯ-ದರ್ಶಿ ಎಂ.ಜಿ. ಚಂದ್ರಯ್ಯ,ಕಾನೂನು ಸಲಹೆಗಾರ ಎಚ್.ಆರ್.ರಘುರಾಂ ಒತ್ತಾಯಿಸಿದ್ದಾರೆ.

SCROLL FOR NEXT