ಜಿಲ್ಲಾ ಸುದ್ದಿ

ಅಂಚೆ ಪಾರ್ಸೆಲ್‍ನಲ್ಲಿ ಬಂತು ಸ್ನೇಕ್, ಬೆಸ್ಕಾಂ ಅಧಿಕಾರಿಗೆ ಕಾದಿತ್ತು ಶಾಕ್!

ಬೆಂಗಳೂರು: ಅಂಚೆಯಲ್ಲಿ ಪಾರ್ಸೆಲ್ ಬಂದರೆ ಉಡುಗೊರೆ ಅಥವಾ ಮತ್ತೇನೋ ವಿಶೇಷ ಇರುವುದು ಸಹಜ. ಆದರೆ, ಈ ಕೋರಿಯರ್ ನಲ್ಲಿ ನಾಗರಹಾವು ಬಂದಿವೆ!

ಆಶ್ಚರ್ಯವಾದರೂ ಇದು ಸತ್ಯ. ನಗರದ ಶಿವಾನಂದ ವೃತ್ತದಲ್ಲಿರುವ ಬೆಸ್ಕಾಂ ಕಚೇರಿಗೆ ಇಂತಹದೊಂದು ಉಡುಗೊರೆ ಬಂದಿದೆ. ಆ ಉಡುಗೊರೆ ಬಾಕ್ಸ್ ನಲ್ಲಿ ನಾಗರಹಾವು ಪತ್ತೆಯಾಗಿದೆ. ಆ ಕೋರಿಯರ್ ಬೆಸ್ಕಾಂನ ತುಮಕೂರು ವಲಯದ ಕಚೇರಿ ವಿಳಾಸದಿಂದ ಬಂದಿದೆ. ಈ ಸಂಬಂಧ ಆ್ಯಂಜಲಿನ್ ಡಿಸಿಲ್ವಾ ಎಂಬುವವರು ಹೈ ಗ್ರೌಂಡ್ಸ್ ಠಾಣೆಗೆ ಬುಧವಾರ ದೂರು ದಾಖಲಿಸಿದ್ದಾರೆ. ಆದರೆ, ಅಂಚೆ ಪಾರ್ಸೆಲ್ ನಲ್ಲಿ ಬಂದಿರುವುದು ಹಾವೇ ಎನ್ನುವುದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ನಡೆದಿದ್ದು ಏನು?

 ಆ್ಯಂಜಲಿನ್ ಅವರು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದಾರೆ (ಈ ಹಿಂದೆ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದರು).

ಮಂಗಳವಾರ ಬೆಳಗ್ಗೆ ಅವರು ಕಚೇರಿಯಲ್ಲಿದ್ದಾಗ ಕೋರಿಯರ್ ಬಂದಿದೆ (ಅವರ ಹೆಸರಿನಲ್ಲಿ). ತುಮಕೂರು ವಲಯದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಶೈಲಜಾ ಹಾಗೂ ಪತಿ ಶಿವಪ್ರಸಾದ್ ಅವರು ಈ ಬಾಕ್ಸ್ ಕಳುಹಿಸಿದ್ದಾರೆ. ಆಅದನ್ನು ತೆರೆದು ನೋಡಿದಾಗ ಬಾಕ್ಸ್ ನೊಳಗೆ ನಾಗರಹಾವು ಇತ್ತು ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಅಲ್ಲದೆ ಶಿವಪ್ರಸಾದ್ ಅವರು ಈ ಹಿಂದೆ ನನಗೆ ಬೆದರಿಕೆ ಪತ್ರ ಬರೆದಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ದೂರುದಾರರು ಕೋರಿಯರ್ ನಲ್ಲಿ ಹಾವು ಬಂದಿದೆ ಎಂದು ದೂರು ನೀಡಿದ್ದಾರೆ. ಆದರೆ, ಈ ಬಗ್ಗೆ ಅವರು ಯಾವುದೇ ಛಾಯಾಚಿತ್ರ ನೀಡಿಲ್ಲ. ಹಾವು ಇರುವ ಆ ಬಾಕ್ಸ್ ಸಹ ಅವರ ಬಳಿ ಇಲ್ಲ. ಹಾಗಾಗಿ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

SCROLL FOR NEXT