ಬೆಂಗಳೂರು: ಸಮಾಜದಲ್ಲಿ ಕೇವಲ ಭ್ರಷ್ಟ ಅಧಿಕಾರಿಗಳಲ್ಲದೇ ಪ್ರಾಮಾಣಿಕ ಅಧಿಕಾರಿಗಳೂ ಇದ್ದಾರೆ. ಅಂಥವರನ್ನು ಪ್ರಶಂಸಿದಾಗ ಇನ್ನೂ ಹೆಚ್ಚಿನ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಾ ರೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಅಭಿಪ್ರಾಯಪಟ್ಟರು.
ಆಮ್ಆದ್ಮಿಪಕ್ಷ (ಎಎಪಿ) ಜಯನಗರ ಆರ್ ಟಿಒ ಕಚೇರಿ ಎದುರು ಹಮ್ಮಿಕೊಂಡಿದ್ದ ಲಂಚ ಮುಕ್ತ ಅಭಿಯಾನದಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆಯೇ ಆರ್ ಟಿಒ ಅನ್ನು ಸಂಪೂರ್ಣ ಸಂಪ್ಯೂಟರೀಕರಣಕ್ಕೆ ತೀರ್ಮಾನಿಸಿ ಚಾಲನೆ ನೀಡಲಾಗಿತ್ತು. ಆದರೆ ಅದು ಶೇ.60ರಷ್ಟು ಮಾತ್ರ ಸಾಧ್ಯವಾಗಿದೆ ಎಂಬು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಬಿ.ಎನ್.ನಾಗರಾಜ್ ಮಾತನಾಡಿ, ಆರ್ ಟಿಒ ಕಚೇರಿಗಳಲ್ಲಿ ಮಧ್ಯವರ್ಥಿಗಳ ಹಾವಳಿ ಹೆಚ್ಚಾಗಿದ್ದು, ಬಡವರ ಹಣ ಸುಲಿಗೆಯಾಗುತ್ತಿದೆ. ಆಟೋ ಡ್ರೈವರ್ ಗಳು ಲೈಸೆನ್ಸ್ ಪಡೆಯುವ ಸಂದರ್ಭದಲ್ಲಿ ಡ್ರೈವಿಂಗ್ ಸ್ಕೂಲ್ ಗೆ ಹೋಗುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ಇಲ್ಲೆಲ್ಲಾ ಸುಧಾರಣೆಗಳಾಗ- ಬೇಕಿದೆ. ಅಲ್ಲದೇ ಪ್ರಾಮಾಣಿಕ ಅಧಿಕಾರಿಗಳ ಅನಗತ್ಯ ವರ್ಗಾವಣೆ ಸಾಮಾನ್ಯವಾಗಿದ್ದು, ವ್ಯವಸ್ಥೆಯಲ್ಲಿ ಇವರಿಗೆ ಬೆಂಬಲ ದೊರೆಯುತ್ತಿಲ್ಲ.
ಇದು ಬದಲಾಗಬೇಕೆಂದು ಆಶಿಸಿದರು. ಎಎಪಿ ರಾಜ್ಯ ಸಹ ಸಂಚಾಲಕ ರವಿ ಕೃಷ್ಣಾರೆಡ್ಡಿ ಮಾತನಾಡಿ, ಇಲ್ಲಿನ ಆರ್‍ಟಿಒ ಕಚೇರಿ ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿದ್ದರೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ವಿದ್ಯಾವಂತರು ಹಾಗೂ ಸಾರ್ವಜನಿಕರು ಮಧ್ಯವರ್ತಿಗಳ ಸಹವಾಸಕ್ಕೆ ಹೋಗದೆ ನೇರವಾಗಿ ಕಚೇರಿ ಬಂದು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಈ ಮೂಲಕ ಲಂಚ ನೀಡುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದರು. ಬಳಿಕ ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹೋಳ್ಕರ್ ಅವರು ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷದ ಮುಖಂಡ ಪೃಥ್ವಿ ರೆಡ್ಡಿ, ಶಿವಕುಮಾರ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.