ಜಿಲ್ಲಾ ಸುದ್ದಿ

ಸಭ್ಯನಂತೆ ನಟಿಸಿ ಮದುವೆ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಚೋರನ ಸೆರೆ

ಬೆಂಗಳೂರು: ಮದುವೆ ಮನೆಗೆ ಸಭ್ಯನಂತೆ ಬಂದು ಉಡುಗೊರೆಗಳನ್ನು ಕದ್ದು ಹೋಗುತ್ತಿದ್ದ ಚೋರನೊಬ್ಬನನ್ನು ಮೈಕೋ ಲೇಔಟ್ ಪೊಲೀಸರು ಸೆರೆಹಿಡಿದಿದ್ದಾರೆ.

ಸೈಯ್ಯದ್ ಅಪ್ಸರ್ ಬಂಧಿತ .ಈತನಿಂದ ರು.17.50 ಲಕ್ಷ ಮೌಲ್ಯದ 703 ಗ್ರಾಂ ಆಭರಣ ವಶಪಡಿಸಿಕೊಳ್ಳಲಾಗಿದೆ. ಪಿಳ್ಳಣ್ಣ ಗಾರ್ಡನ್ ನಿವಾಸಿ ಅಪ್ಸರ್, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಕಳ್ಳತನ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದ. ಕಲ್ಯಾಣ ಮಂಟಪಗಳಿಗೆ ಸೂಟು-ಬೂಟು ಧರಿಸಿ ಬರುತ್ತಿದ್ದ ಅಪ್ಸರ್, ಗಂಡು-ಹೆಣ್ಣಿನ ಕಡೆಯವನಂತೆ ಎಲ್ಲರನ್ನೂ ಮಾತನಾಡಿಸುತ್ತಿದ್ದ. ಗಿಫ್ಟ್ ಕವರ್ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಎಲ್ಲರೂ ಊಟಕ್ಕೆ ಹೋದಾಗ ಚಿನ್ನಾಭರಣ, ಹಣ ಹಾಗೂ ಉಡುಗೊರೆಗಳನ್ನು ಕಳವು ಮಾಡತ್ತಿದ್ದ.

2014ಕ ಡಿ.14ರ ರಾತ್ರಿ ಆರತಕ್ಷತೆಯೊಂದರಲ್ಲಿ ಅಪ್ಸರ್ 145 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈತನ ಪತ್ತೆ ಆಗಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಹೈ ಗ್ರೌಂಡ್ಸ್ ಪೊಲೀಸರಿಗೆ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅಪ್ಸರ್, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಮಾಹಿತಿ ಸಂಗ್ರಹಿಸಿದ ಮೈಕೋ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

SCROLL FOR NEXT