ಜಿಲ್ಲಾ ಸುದ್ದಿ

ಭಗವದ್ಗೀತೆ ಸುಡಲು ಹೇಳಿಲ್ಲ: ಭಗವಾನ್

Sumana Upadhyaya

ಬೆಂಗಳೂರು: ದೇಶದಲ್ಲಿ ವಿಚಾರವಾದಿ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ವಿಚಾರವಾದಿಗಳ ವೇದಿಕೆ ವತಿಯಿಂದ ಪುರಭವನದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಭಗವದ್ಗೀತೆ ಸುಡಲು ನಾನು ಎಲ್ಲಿಯೂ ಹೇಳಿಲ್ಲ.ಎಲ್ಲ ಮಹಿಳೆಯರು, ವೈಶ್ಯರು, ಶೂದ್ರರು ಪಾಪಿಗಳು ಎಂದು ಗೀತೆಯ ಅಧ್ಯಾಯವೊಂದರಲ್ಲಿ ಬರೆಯಲಾಗಿದೆ. ಇದನ್ನು ಭಗವದ್ಗೀತೆಯಿಂದ ತೆಗೆಯಬೇಕು ಅಥವಾ ಸುಡಬೇಕೆಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆಹಾರ ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಆಹಾರ ಪದ್ಧತಿಯಲ್ಲಿ ಮಾಂಸಾಹಾರವೂ ಒಂದು. ದನದ ಮಾಂಸ ತಿನ್ನುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಇದನ್ನು ತಿಂದರೆ ತೊಂದರೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ದನ ಸಾಕಿರುವ ರೈತರಲ್ಲಿ ಇಂಥ ಮೂಢನಂಬಿಕೆಗಳಿಲ್ಲ. ಕೃಷಿಗೆ ಉಪಯುಕ್ತವಾಗದ ಪಶುಗಳನ್ನಷ್ಟೇ ಅವರು ಮಾರಾಟ ಮಾಡುತ್ತಾರೆ. ಇಲ್ಲಿ ಆರ್ಥಿಕ ವಿಚಾರ ಎದುರಾಗುತ್ತದೆಯೇ ಹೊರತು ಧರ್ಮದ ವಿಚಾರ ಅಲ್ಲ ಎಂದು ಹೇಳಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದನದ ಮಾಂಸ ಮಾರಾಟ ಪ್ರಬಲ ಉದ್ಯಮವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ದನದ ಮಾಂಸ ಸೇವನೆ ವಿರೋಧಿಸುವವರು ಕೋಳಿ, ಕುರಿ ಸೇವನೆಯನ್ನು ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು, ಎಲ್ಲ ಪ್ರಾಣಿಗಳಿಗೂ ಜೀವವಿರುತ್ತದೆ. ಕೇವಲ ದನದ ಮಾಂಸ ಸೇವನೆಗೆ ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಇತಿಹಾಸ ಕೆದಕಿದಾಗ ಬುದ್ಧ, ರಾಮ, ಕೃಷ್ಣ,ವಿವೇಕಾನಂದ ಮಾಂಸ ತಿನ್ನುತ್ತಿದ್ದರು. ಈ ಬಗ್ಗೆ ಆಧಾರಗಳೂ ಇವೆ. ಶ್ರೀರಾಮ ತಾನೂ ಮದ್ಯ ಕುಡಿದು ಸೀತೆಗೂ ಕುಡಿಸುತ್ತಿದ್ದ.ಜತೆಗೆ ಮಾಂಸವನ್ನೂ ತಿನ್ನುತ್ತಿದ್ದ ಎಂಬುದಕ್ಕೆ ಆಧಾರಗಳಿವೆ. ಈ ವಾಸ್ತವವನ್ನು ಹೇಳಿದರೆ ಕೊಲ್ಲುವ ಬೆದರಿಕೆ ಹಾಕುತ್ತಾರೆ ಎಂದು ಟೀಕಿಸಿದರು.

SCROLL FOR NEXT