ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ಆಗ್ರಹಿಸಿ ಪ್ರತಿಭಟನೆಕಾರರು ಶುಕ್ರವಾರ 'ಮಹದಾಯಿ ನಕ್ಷೆಗೆ ರಕ್ತಾಭಿಷೇಕ' ಮಾಡುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದರು.
ಗುರುವಾರವಷ್ಟೆ ಚಿತ್ರನಟ ಸುದೀಪ್ ನರಗುಂದದಲ್ಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಹಲವು ಸಂಘಟನೆಗಳ ಯುವ ಕಾರ್ಯಕರ್ತರು ಗದಗಿನಲ್ಲಿ ಮಹದಾಯಿ ನಕ್ಷೆಗೆ ರಕ್ತಾಭಿಷೇಕ ಮಾಡಿದರು. ಜತೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಮಹದಾಯಿ ನೀರಲ್ಲಿ ನಮ್ಮ ಹಕ್ಕು ಕೊಡಿಸಿ, ಬರಗಾಲದ ನೆಲದಲ್ಲಿ ಹಸಿರು ಚಿಗುರುವಂತೆ ಮಾಡಬೇಕೆಂದು ಮನವಿ ಮಾಡಿದರು.
ಎಂದಿನಂತೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ್ದ ಯುವಕರು ಗಾಂಧಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ಗೋವಾ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ರಕ್ತಾಭಿಷೇಕ, ರಕ್ತದಲ್ಲಿ ಪತ್ರ ಬರೆದದ್ದು, ಹೋರಾಟದ ಕೆಚ್ಚು ಇಮ್ಮಡಿಗೊಳಿಸಿತು.
ಮುಂದುವರಿದ ಬಂದ್: ನರಗುಂದ, ನವಲಗುಂದ ರೈತರು ಎಂದಿನಂತೆ ಹುಬ್ಬಳ್ಳಿ ವಿಜಯಪುರ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದು ವರೆಸಿದರು. ಅಂಗಡಿಮುಂಗಟ್ಟುಗಳು ತೆರೆದು ಜನಜೀವನ ತುಸು ನಿರಾಳ ಎನಿಸಿದ್ದರೂ ಜನತೆ ಸ್ವಯಂಪ್ರೇರಣೆಯಿಂದ ಪ್ರತಿಭಟನಾ ವೇದಿಕೆಗೆ ಬಂದು ಭಾಗವಹಿಸುತ್ತಿದ್ದರು. ಆಯಾ ತಾಲೂಕಿನ ವಿವಿಧ ಗ್ರಾಮಗಳ ರೈತರು ಚಕ್ಕಡಿ ಸಮೇತ ಬಂದು ಇಡೀದಿನ ರಸ್ತೆಯಲ್ಲಿ ಚಕ್ಕಡಿ ನಿಲ್ಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರಿಂದ ಮಹದಾಯಿ ಹೋರಾಟ ಜನಾಂದೋಲನವಾಗಿ ಪಸರುತ್ತಲೇ ಸಾಗಿದೆ.
ಧಾರವಾಡದಲ್ಲಿ ವಕೀಲರು ಸಹ ಹೋರಾಟ ಮುಂದುವರೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರತ್ಯೇಕ ಹೋರಾಟ ಶುರು ಮಾಡಿದ್ದರಿಂದ ರೈತರಲ್ಲಿ ಗೊಂದಲ ಮೂಡಿದೆ. ಹೀಗೆ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಹೋರಾಟದಲ್ಲಿನ ತಮ್ಮ ಸಂಘನೆಯನ್ನು ಒಡೆಯುವ ಹುನ್ನಾರ ನಡೆಸಿದೆ ಎಂದು ಕೆಲವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 50 ದಿನಗಳಿಂದ ನಡೆಯುತ್ತಿರುವ ಈ ಹೋರಾಟದಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ 16 ಕೋಟಿ ನಷ್ಟವಾಗಿದೆ.
ಈ ಹೋರಾಟ ನಿಲ್ಲುವ ಯಾವುದೇ ಲಕ್ಷಣಗಳಿಲ್ಲದ ಕಾರಣ ಸಂಸ್ಥೆ ತನ್ನ ಬಸ್ಸುಗಳ ಮಾರ್ಗ ಬದಲಿಸಿ ಓಡಿಸುತ್ತಿದೆ. ಆದಾಗ್ಯೂ ಆ ಮಾರ್ಗದಲ್ಲೂ ಪ್ರತಿಭಟನೆ ನಡೆದು ಇಡೀ ದಿನ ಬಸ್ಸುಗಳು ನಿಂತಲ್ಲೇ ನಿಲ್ಲುತ್ತವೆ. ಕೆಲವೆಡೆ ಕಲ್ಲೇಟೂ ಬೀಳುತ್ತಿದೆ. ಚಿತ್ರೋದ್ಯಮದ ಬೆಂಬಲ: ಈ ಮಹದಾಯಿ ನೀರಿಗಾಗಿ ಆಗ್ರಹಿಸಿ ಸೆ.26 ರಂದು ಕರೆ ನೀಡಲಾಗಿರುವ 'ಕರ್ನಾಟಕ ಬಂದ್'ಗೆ ಬೆಂಬಲ ವ್ಯಕ್ತಪಡಿಸಿರುವ 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ' ಅಂದು ಹೆಚ್ಚಿನ ಸಂಖ್ಯೆಯ ಕಲಾವಿದರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗುವುದಾಗಿ ಹೇಳಿದೆ.