ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಯುವಜನರು ವಿಳಂಬ ಮಾಡದೆ ಸಮಾಜವಾದ ಚಿಂತನೆಯ ಹರಿಕಾರರಾದ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಆದರ್ಶ ಹಾಗೂ ತತ್ವ ಅನುಸರಿಸುವಂತೆ ಮಾಜಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕರೆ ನೀಡಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಎಂವಿಆರ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ `ಮಹಾತ್ಮ ಗಾಂಧಿ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಪರಂಪರೆಯ ಪ್ರಸ್ತುತತೆ ಇಂದು ಮತ್ತು ಮುಂದು' ಎಂಬ ವಿಷಯ ಕುರಿತು ಮಾತನಾಡಿದರು. ಗಾಂಧಿಯವರನ್ನು ಅನುಸರಿಸಿದರೆ ಶಾಂತಿ ಲಭಿಸುತ್ತದೆ. ಜೈನ, ಬೌದ್ಧ ಧರ್ಮಗಳ ಅಂತರಂಗದ ಧ್ವನಿಯೇ ಶಾಂತಿಯಾದ್ದರಿಂದ ಅದನ್ನು ಗಾಂಧಿ ಕಾರ್ಯರೂಪಕ್ಕೆ ತಂದರು. ಇಡೀ ಪ್ರಪಂಚದಲ್ಲಿಯೇ ಭಾರತ ಅತ್ಯಂತ ಸುರಕ್ಷಿತ ದೇಶ ಎಂದರು.
ಪ್ರಸ್ತುತ ಸಂದರ್ಭದಲ್ಲಿ ರೈತ ಸಾವಿಗೆ ಶರಣಾಗುತ್ತಿದ್ದಾನೆ. ಇದಕ್ಕೆ ಮಾರುಕಟ್ಟೆಯ ಪ್ರಭಾವವೇ ಮುಖ್ಯ ಕಾರಣ ಎಂದರು ಸಹ ಕೃಷಿ ವಿವಿಗಳು ರೈತರ ಬಳಿ ಹೋಗದಿರುವುದು ಕಾರಣವಾಗಿದೆ. ಗಾಂಧಿಯವರು ದೇಶ ಸ್ವಾತಂತ್ರ್ಯ ಕಂಡ ನಂತರ ಹಳ್ಳಿಗಳ ಉದ್ಧಾರವಾಗಬೇಕು. ಗ್ರಾಮೀಣರ ಬದುಕು ಹಸನಾಗಬೇಕು ಎನ್ನುತ್ತಿದ್ದರು. ಆದರೆ ಅವರ ಚಿಂತನೆಯನ್ನು ಸಾಕಾರಗೊಳಿಸಲು ಸರ್ಕಾರಗಳು ಸೋತವು. ಆದ್ದರಿಂದಲೇ ರೈತರ ಆತ್ಮಹತ್ಯೆ ಸಂಭವಿಸುತ್ತಿದೆ. ಇಡೀ ದೇಶ ಬಂಡವಾಳಶಾಹಿಯ ಹಿಡಿತಕ್ಕೆ ಸಿಕ್ಕಿದೆ. ಬಂಡವಾಳಶಾಹಿ ಇದ್ದ ಕಡೆ ಸಮಾನತೆ ಇರುವುದಿಲ್ಲ. ಅಲ್ಲೇನಿದ್ದರೂ ಹಣಕ್ಕೆ ಪ್ರಾಮುಖ್ಯತೆ ಹೆಚ್ಚು ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಮಾತನಾಡಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ. ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಮಾಜಿ ಸದಸ್ಯ ಎಂ.ವಿ. ರಾಜಶೇಖರನ್, ಡಬ್ಲ್ಯೂ.ಆರ್. ಕೃಷ್ಣ, ಮುರಳೀಧರ್ ಹಾಲಪ್ಪ, ಶ್ರೀನಿವಾಸಮೂರ್ತಿ ಇದ್ದರು.