ಬೆಂಗಳೂರು: ಕೊಳವೆ ಬಾವಿಗೆ ನೆಲ ಕೊರೆದರೆ ಸಾಫ್ಟ್ ಡ್ರಿಂಕ್ಸ್ ನಂತೆ ವಿಷ ದ್ರವ ಚಿಮ್ಮುತ್ತದೆ. ನಮಗೆ ಬಿಬಿಎಂಪಿ ನೀಡುವ ಮೂಲಸೌಕರ್ಯ ಬೇಕಾಗಿಲ್ಲ, ಕಸ ಹಾಕುವುದು ನಿಲ್ಲಿಸಿದರಷ್ಟೇ ಸಾಕು. ಬಡವರ ನಿವಾಸಗಳ ಮುಂದೆ ಕಸದ ರಾಶಿ ಹಾಕುವ ಧೈರ್ಯವನ್ನು ಇನ್ಫೋಸಿಸ್‍ನಂತಹ ಕಂಪನಿಗಳ ಮುಂಭಾಗದಲ್ಲಿ ತೋರಿಸಿ.
ಎಸ್. ಬಿಂಗಿಪುರಕ್ಕೆ ಭಾನುವಾರ ಭೇಟಿ ನೀಡಿದ ಮೇಯರ್ ಮಂಜುನಾಥ ರೆಡ್ಡಿ ತಮ್ಮ ಆಡಳಿತದ ಮೊದಲ ದಿನವೇ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಿದ ರೀತಿ ಇದು. ಎಷ್ಟೇ ಮನವೊಲಿಕೆಗೆ ಪ್ರಯತ್ನಿಸಿದರೂ ಬಿಂಗಿಪುರ ವಾಸಿಗಳು ಕರಗಲಿಲ್ಲ. ಕಡೇ ಪಕ್ಷ ಎರಡು ದಿನಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರೂ ಸ್ಥಳೀಯರಿಂದ ಬೆಲೆ ದೊರೆಯಲಿಲ್ಲ. ಹೀಗಾಗಿ ಮೇಯರ್, ಉಪಮೇಯರ್ ಹೇಮಲತಾ ಅಧಿಕಾರಿಗಳು ಸೋತು ಹಿಂದಿರುಗಬೇಕಾಯಿತು.
ನಿತ್ಯ ಜೀವನಕ್ಕೆ ತೊಂದರೆ: ಬಿಂಗಿಪುರದಲ್ಲಿ ಬಯಲೊಂದರಲ್ಲಿ ಕಸ ಹಾಕುತ್ತಿದ್ದು, ಯಾವುದೇ ನಿರ್ವಹಣೆಯಿಲ್ಲದೆ ನಮ್ಮ ನಿತ್ಯಜೀವನಕ್ಕೆ ತೊಂದರೆ-ಯಾಗಿದೆ ಎಂದ ಸ್ಥಳೀಯರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂಬ ಮೇಯರ್ ಭರವಸೆ ಮನಮುಟ್ಟಲಿಲ್ಲ. ಸೆ.15 ರವರೆಗೆ ಕಸ ಹಾಕಲು ಅವಕಾಶ ನೀಡಬೇಕು, ಚಿಕ್ಕನಾಗಮಂಗಲದಲ್ಲಿ ಕಸ ಘಟಕ ನಿರ್ಮಾಣ ಪೂರ್ಣಗೊಳ್ಳುತ್ತಿದ್ದು, 2 ದಿನಗಳ ಅವಕಾಶ ನೀಡಿದ ನಂತರ ಕಸ ಹಾಕುವುದಿಲ್ಲ ಎಂದು ಮೇಯರ್ ಸ್ಥಳೀಯರಿಗೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಸ್ಥಳೀಯರು ಒಂದು ದಿನವೂ ಕಸ ಹಾಕಲು ಅವಕಾಶ ನೀಡುವುದಿಲ್ಲ, ಬಿಬಿಎಂಪಿ ನೀಡುವ ಮೂಲಸೌಕರ್ಯವೂ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲಕಾಲಕ್ಕೆ ಆರೋಗ್ಯ ಶಿಬಿರ ಏರ್ಪಡಿಸುತ್ತಿಲ್ಲ, ಔಷಧಿ ಸಿಂಪಡಿಸುತ್ತಿಲ್ಲ. ಕೇಳಿದರೆ, ಚುನಾವಣಾ ಕರ್ತವ್ಯದಿಂದ ಗಮನಹರಿಸಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ ಎಂದು ನಿವಾಸಿಗಳು ದೂರಿದರು. ಸ್ಥಳೀಯರ ಹಲವಾರು ದೂರುಗಳನ್ನು ಆಲಿಸಿದ ಮೇಯರ್ ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. `ಕಟ್ಟಡವೊಂದು ಖಾಲಿಯಿದ್ದರೆ ಅಧಿಕಾರಿಗಳನ್ನು ಇಲ್ಲಿಯೇ ನೆಲೆಸುವಂತೆ ಮಾಡಲಾಗುವುದು. ರು.1.85 ಕೋಟಿ ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರು ಪೂರೈಕೆಗೆ ಹಣ ಮಂಜೂರು ಮಾಡಲಾಗುವುದು' ಎಂದು ಭರವಸೆ ನೀಡಿದರು.
ಸೋಮವಾರ ಬೆಳಗ್ಗೆಯಿಂದಲೇ ಕಾಮಗಾರಿ ಆರಂಬಿsಸಬೇಕು ಎಂದು ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸರ್ವಮಂಗಳ ಅವರಿಗೆ ಮೇಯರ್ ಮಂಜುನಾಥ ರೆಡ್ಡಿ ಸೂಚನೆ ನೀಡಿದರು. ಉಪಮೇಯರ್ ಹೇಮಲತ ಹಾಗೂ ಬಿಬಿಎಂಪಿಯ ಹಲವಾರು ಅಧಿಕಾರಿಗಳು ಹಾಜರಿದ್ದರು. ಮಣ್ಣು ಸುರಿದ ಅಧಿಕಾರಿಗಳು: `ಮೇಯರ್ ಬರುತ್ತಿದ್ದಾರೆ ಎಂದು ತಿಳಿದಿದ್ದರಿಂದ ಕಸದ ಮೇಲೆ ಮಣ್ಣು ಹಾಕಲಾಗುತ್ತಿದೆ. ಮೂರು ತಿಂಗಳಿಂದ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿದ್ದಿಲ್ಲ.
ಆಡಳಿತಾಧಿಕಾರಿ ವಿಜಯಭಾಸ್ಕರ್ ಭೇಟಿ ನೀಡಿ ಪರಿಹರಿಸುವ ಭರವಸೆ ನೀಡಿದ್ದರೂ, ಪ್ರಯೋಜನವಾಗಿಲ್ಲ. ಕೊಳವೆ ಬಾವಿಗಳಿಂದ ವಿಷ ಚಿಮ್ಮುತ್ತಿದ್ದು, ಪಶುಗಳಿಗೂ ಕುಡಿಯಲು ಶುದಟಛಿವಾದ ನೀರು ಲಭ್ಯವಾಗುತ್ತಿಲ್ಲ. ಗ್ರಾಮದಲ್ಲಿ ಡೆಂಘೀ, ಚಿಕೂನ್‍ಗುನ್ಯಾ ಸೇರಿದಂತೆ ಹಲವು ರೋಗಗಳು ಹೆಚ್ಚಿವೆ. ಬಿಬಿಎಂಪಿಯಿಂದ ನೀಡುವ ಮೂಲಸೌಕರ್ಯ ನಮಗೆ ಬೇಕಾಗೇ ಇಲ್ಲ. ಕೂಡಲೇ ಕಸ ಹಾಕುವುದನ್ನು ನಿಲ್ಲಿಸಬೇಕು. ಯಾರೋ ಸೃಷ್ಟಿಮಾಡುವ ಕಸವನ್ನು ಗ್ರಾಮದಲ್ಲಿ ತಂದು ಹಾಕಿ ಪರಿಸರ ಹಾಳುಮಾಡಬೇಡಿ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಗಳ ಸರಮಾಲೆ: ಬಿಂಗಿಪುರದ 20.6 ಎಕರೆ ಜಾಗದಲ್ಲಿ ಕಸ ಹಾಕಲಾಗುತ್ತಿದೆ. ಆದರೆ, ಇಲ್ಲಿ ಕಸ ಸುರಿಯಲಾಗುತ್ತಿದೆಯೇ ಹೊರತು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡುತ್ತಿಲ್ಲ. ಒಂದು ಬದಿಯಲ್ಲಿ ಮಾತ್ರ ಸಾಮಾನ್ಯ ಕಾಂಪೌಂಡ್ ನಿರ್ಮಿಸಲಾಗಿದ್ದು ಪ್ರವೇಶಕ್ಕೆ ಮುಕ್ತವಾಗಿದೆ. ಭಾನುವಾರ ಮೇಯರ್ ಬರುತ್ತಾರೆ ಎಂಬ ಕಾರಣಕ್ಕೆ ಕಸದ ಮೇಲೆ ಮಣ್ಣು ಹಾಕಿ ಮುಚ್ಚುವ ಕೆಲಸ ಆರಂಭವಾಗಿತ್ತು.
ನಿತ್ಯ 145 ಲೋಡ್ ಕಸ ಹಾಕಲಾಗುತ್ತಿದೆ. ಕಾಂಪೌಂಡ್ ಕೂಡಾ ಇಲ್ಲದೆ ದುರ್ವಾಸನೆ ನೇರವಾಗಿ ವಸತಿಪ್ರದೇಶಕ್ಕೆ ಹೋಗುತ್ತಿದೆ. 2012ರಿಂದ ಇಲ್ಲಿ ಕಸ ಸುರಿಯಲಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗಿದ್ದರಿಂದ ಬಿಬಿಎಂಪಿ ಟ್ಯಾಂಕರ್ ನಲ್ಲಿ ನೀರು ಪೂರೈಸುತ್ತಿದೆ. ಆದರೆ ಕೇವಲ ಒಂದೇ ಟ್ಯಾಂಕರ್ ಲಭ್ಯವಿರುವುದರಿಂದ ಎಲ್ಲರಿಗೂ ಸಾಕಾಗುವಷ್ಟು ನೀರು ಸಿಗುತ್ತಿಲ್ಲ. ಹೀಗಾಗಿ ಕಲುಷಿತ ನೀರು ಬಳಸಬೇಕಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಿವೆ