ಬೆಳಗಾವಿ: ಗಡಿ ಭಾಗದಲ್ಲಿ ಮತ್ತೆ ಮರಾಠಿಗರ ತಗಾದೆ ಶುರುವಾಗಿದೆ. ಗಡಿಭಾಗದಲ್ಲಿ ವಾಸಿಸುತ್ತಿರುವ ಮರಾಠಿಗರಿಗೆ ಸರ್ಕಾರಿ ದಾಖಲೆ ನೀಡಬೇಕು. ಮರಾಠಿ ಸಾಹಿತ್ಯ ಸಮ್ಮೇಳನಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು, ಗಡಿ ವಿವಾದವನ್ನು ಸರ್ಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿ ನಿನ್ನೆ ಯಳ್ಳೂರಿನಲ್ಲಿ ನಡೆದ ಗ್ರಾಮೀಣ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.
ಯಳ್ಳೂರು ಗ್ರಾಮ ಇರುವುದು ಬೆಳಗಾವಿ ಗಡಿ ಭಾಗದಲ್ಲಿ. ಇಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಸುಮಾರು ಸಾವಿರ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಇತ್ತೀಚೆಗೆ ಸಿಯಾಚಿನ್ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ ಯೋಧರಿಗೆ ಹಾಗೂ ಉಗ್ರರ ಗುಂಡಿಗೆ ಬಲಿಯಾದ ಸೈನಿಕ ಮಹಾರಾಷ್ಟ್ರದ ಸಂತೋಷ ಮಹಾಡಿಕ, ಸಹದೇವ ಮೋರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೈಚಾರಿಕ ಸಂಘರ್ಷಕ್ಕೆ ಬಲಿಯಾದ ಗೋವಿಂದ ಪನ್ಸರೆ, ಡಾ.ಎಂ.ಎಂ.ಕಲಬುರ್ಗಿ ಹಂತಕರನ್ನು ಬಂಧಿಸಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು. ಗಡಿಭಾಗದ ಮರಾಠಿಗರಿಗೆ ಮರಾಠಿ ಪ್ರಾತಿನಿಧ್ಯ ನೀಡುವ ಅನೇಕ ಬೇಡಿಕೆಗಳನ್ನು ಕರ್ನಾಟಕ ಸರ್ಕಾರದ ಮುಂದಿಡಲಾಯಿತು.