ಬೆಂಗಳೂರು: ಜಪ್ತಿಮಾಡಿರುವ ಎಲ್ಲ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಹರಾಜಿಗೆ ತಡೆ ಇರುವ ಸಂದರ್ಭದಲ್ಲಿ ಕೇವಲ ನಿರಾಣಿ ಶುಗರ್ಸ್ ಕಂಪನಿಗೆ ನೀಡಿರುವ ತಡೆ ತೆರವುಗೊಳಿಸುವಂತೆ ಏಕೆ ಕೋರಲಾಗಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನಿರಾಣಿ ಶುಗರ್ಸ್‍ನ ಸಕ್ಕರೆ ಹರಾಜಿಗೆ ನೀಡಿದ್ದ ತಡೆ ತೆರವು ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ನ್ಯಾ.ಅಶೋಕ್ ಬಿ ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಪ್ರಶ್ನಿಸಿದೆ. ಅಲ್ಲದೆ, ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಈಗಾಗಲೇ ಎರಡು ತಿಂಗಳು ಎರಡು ವಾರ ಕಳೆದಿದೆ. ತೆರವಿಗೆ ಅರ್ಜಿ ಸಲ್ಲಿಸಲು ಕಾರಣವೇನು ಎಂದು ವಿಚಾರಣೆ ವೇಳೆ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಮದುಸೂಧನ್ ಆರ್.ನಾಯಕ್ ಅವರನ್ನು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ರಾಜ್ಯ ಸರ್ಕಾರವು ಎಲ್ಲ ಸಕ್ಕರೆ ಕಾರ್ಖಾನೆಗಳ ಪರವಾದ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕುತ್ತಿದೆ. ಹಂತಹಂತವಾಗಿ ಕಾನೂನು ಕ್ರಮ ನಡೆಯುತ್ತಿದೆ. ಶೀಘ್ರದಲ್ಲಿಯೇ ಉಳಿದ ಸಕ್ಕರೆ ಕಾರ್ಖಾನೆಗಳ ವಿರುದ್ಧವೂ ಮಧ್ಯಂತರ ಅರ್ಜಿ ಹಾಕಲಾಗುವುದು. ಸುಪ್ರೀಂ ಕೋರ್ಟ್ ಆದೇಶ ಹಾಗೂ ಇತರಕಾನೂನು ತೊಡಕಿನ ಕಾರಣದಿಂದ ಮಧ್ಯಂತರ ಅರ್ಜಿ ಸಲ್ಲಿಕೆಗೆ ವಿಳಂಬವಾಗಿದೆ ಎಂದು ತಿಳಿಸಿದರು. ನಿರಾಣಿ ಶುಗರ್ಸ್ ನಿಂದ ವಶಕ್ಕೆ ಪಡೆದಿದ್ದ ಸುಮಾರು 8895 ಮೆಟ್ರಿಕ್ ಟನ್ ಸಕ್ಕರೆಗೆ ಇ-ಟೆಂಡರ್ ಪ್ರಕ್ರಿಯೆ ನಡೆದಿದ್ದು, ಇದರಿಂದ ಎಂಎಸ್‍ಐಎಲ್ ರೂ.18.24 ಕೋಟಿ ಹಣವನ್ನು ಸಂಗ್ರಹಿಸಿದೆ. ಆದರೆ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮುಂದಿನ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ತಿಳಿಸಿದ ಅಡ್ವೋಕೇಟ್ ಜನರಲ್ ತಡೆಯನ್ನು ತೆರವು ಮಾಡಬೆಕು ಎಂದು ಮನವಿ ಮಾಡಿದರು.
ಇಂದು ತೀರ್ಪು: ಸರ್ಕಾರದ ಮಧ್ಯಂತರ ಅರ್ಜಿಗೆ ಸಂಬಂಧಿಸಿ ಗುರುವಾರ ವಿಚಾರಣೆ ಅಂತ್ಯಗೊಂಡಿದ್ದು, ಶುಕ್ರವಾರ ತೀರ್ಪು ಪ್ರಕಟವಾಗಲಿದೆ. ಈಗಾಗಲೇ ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದಗಳನ್ನು ದಾಖಲಿಸಿರುವ ಏಕಸದಸ್ಯ ಪೀಠವು, ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.