ಜಿಲ್ಲಾ ಸುದ್ದಿ

ನ್ಯಾ. ಆಡಿ ಪದಚ್ಯುತಿ ಷಡ್ಯಂತ್ರ ಬಯಲು: ಸುರೇಶ್ ಕುಮಾರ್

Srinivas Rao BV

ಬೆಂಗಳೂರು: ರಾಜ್ಯ ಸರ್ಕಾರ ಉಪಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ದುಸ್ಸಾಹಕ್ಕೆ ಕೈಹಾಕಿದೆ. ಉಪ ಲೋಕಾಯುಕ್ತ ನ್ಯಾ. ಸುಭಾಷ್ ಆಡಿ ಪದಚ್ಯುತಿಗೆ ಸಮರ್ಪಕ ದಾಖಲೆಗಳಿಲ್ಲದಿದ್ದರೂ ರಾಜ್ಯ ಸರ್ಕಾರ ಪದಚ್ಯುತಿ ಮಂಡನೆ ಮಾಡಿದೆ.

ಕಾನೂನಿನ ಪ್ರಕಾರ ಲೋಕಾಯುಕ್ತ, ಉಪ ಲೋಕಾಯುಕ್ತರು ಅಸಮರ್ಥ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಮೂರನೇ ಒಂದು ಭಾಗ ವಿಧಾನಸಭಾ ಸದಸ್ಯರ ಸಹಿ ಪಡೆದು ಪದಚ್ಯುತಿಗೊಳಿಸಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ ಆಧಾರ ರಹಿತ ನಡೆ ಬಗ್ಗೆ ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಬಿಜೆಪಿ ಶಾಸಕ ಸುರೇಶ್‍ ಕುಮಾರ್ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಉಪ ಲೋಕಾಯುಕ್ತರ ಪದಚ್ಯುತಿಗೆ ಸಮರ್ಪಕ ಕಾರಣಗಳಿವೆ ಎಂದಾದಲ್ಲಿ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕ್ರಮ ಜರುಗಿಸುವಂತೆ ಪತ್ರ ಬರೆಯಬೇಕು. ವಿಚಾರಣೆ ನಂತರ ಉಪ ಲೋಕಾಯುಕ್ತರು ಅಸಮರ್ಥರು ಎಂದಾದಲ್ಲಿ, ಆ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಕಳುಹಿಸುತ್ತಾರೆ. ಆ ಸಂದರ್ಭದಲ್ಲಿ ವಿಧಾನಸಭೆಯ ಮೂರನೇ ಒಂದು ಭಾಗದಷ್ಟು ಸದಸ್ಯರು ಪದಚ್ಯುತಿಗೆ ಅನುಮೋದನೆ ನೀಡಿದರೆ ಪದಚ್ಯುತಿ ನಿರ್ಣಯವಾಗಲಿ ಎಂದು ತಿಳಿಸಿದ್ದಾರೆ.

ಅಡ್ವೋಕೇಟ್ ಜನರಲ್ ಅವರ ಸೂಚನೆ ಮೇರೆಗೆ ನ್ಯಾ. ಆಡಿ ಕಾರ್ಯ ನಿರ್ವಹಿಸುತ್ತಿದ್ದರೂ ಕಾನೂನು ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಈ ನಡುವೆಯೇ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರು ನ್ಯಾ. ಸುಭಾಷ್ ಆಡಿ ಪದಚ್ಯುತಿಗಾಗಿ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾಖಲೆಗಳು ಎಲ್ಲಿಂದ ಸಿಕ್ಕಿವೆ:
ಸರ್ಕಾರದ ಆರೋಪಗಳನ್ನು ವಿಧಾನಸಭಾಧ್ಯಕ್ಷರು ಸಹ ಸಮರ್ಥಿಸಿಕೊಂಡಿರುವುದು ದುರದೃಷ್ಟಕರ. ಈ ದಾಖಲೆಗಳು ಎಲ್ಲಿಂದ ಮತ್ತು ಯಾರಿಂದ ಸಿಕ್ಕಿವೆ. ಪದಚ್ಯುತಿ ನಿರ್ಣಯ ಕೈಗೊಂಡ ಎಷ್ಟು ತಿಂಗಳ ನಂತರ ದಾಖಲೆಗಳು ದೊರೆತಿವೆ, ದಾಖಲೆಗಳನ್ನು ಹುಡುಕುವ ಜವಾಬ್ದಾರಿ ಯಾರಿಗೆ ವಹಿಸಲಾಗಿತ್ತು ಎಂಬುದೇ ತಿಳಿಯುತ್ತಿಲ್ಲ. ದೂರು ಸಲ್ಲಿಸಿದ ನಂತರ ಅಗತ್ಯ ದಾಖಲೆಗಳನ್ನು ಹೆಕ್ಕಿ ತೆಗೆಯುವ ಸಂದರ್ಭವನ್ನೇ ಇದೇ ಮೊದಲು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ  ಏನಾದರೂ ಮಾಡಿ ನ್ಯಾ. ಅಡಿ ಅವರನ್ನು  ಪದಚ್ಯುತಿಗೊಳಿಸಬೇಕೆಂಬ ಸರ್ಕಾರದ ಷಡ್ಯಂತ್ರ ಬಯಲಾಗಿ ದೆ. ತನ್ನ ದುರುದ್ದೇಶ ಸಾಧಿಸಿಕೊಳ್ಳಲು ಉಪಯೋಗಿಸಿರುವ ತಂತ್ರ ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಯಾಗಿದ್ದು ಕಪ್ಪುಚುಕ್ಕೆಯಾಗಿ ಉಳಿಯಲಿದೆ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT