ಬೆಂಗಳೂರು: ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಠಾಣಾ ಪೊಲೀಸರು ಗುರುವಾರ ಕೋರ್ಟ್ ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಅಕ್ಟೋಬರ್ 16ರಂದು ನಡೆದ ಜಗದೀಶ್ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸರುವ ಪೊಲೀಸರು, ಇಂದು ನೆಲಮಂಗಲದ ಜೆಎಂಎಫ್ ಸಿ ಕೋರ್ಟ್ ಗೆ 780 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದರು.
ಜಗದೀಶ್ ಅವರು ಬೈಕ್ ಕಳ್ಳರನ್ನು ಹಿಡಿಯಲು ಬಂದಾಗ ನೆಲಮಂಗಲದ ಸಮೀಪ ಪಿಎಸ್ ಐಯನ್ನೇ ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ನಡೆದಿತ್ತು. ಬಳಿಕ ಡಿವೈಎಸ್ಪಿ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಐವರು ಆರೋಪಿಗಳ ಹೆಸರನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಹರೀಶ್ ಬಾಬು, ಮಧು, ತಿಮ್ಮಕ್ಕ, ರಘು, ಹನುಮಂತರಾವ್ ಹೆಸರು ಆರೋಪಪಟ್ಟಿಯಲ್ಲಿದೆ. ಐಪಿಸಿ ಸೆಕ್ಷನ್ 333, 307, 302, 397, 201, 212 , 75ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳಿಂದ 131 ಗ್ರಾಂ ಚಿನ್ನ, ಬೆಳ್ಳಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ. ಪ್ರಕಣದ ಸಂಬಂಧ 72 ಸಾಕ್ಷಿಗಳಿಂದ ಹೇಳಿಕೆ ದಾಖಲಿಸಲಾಗಿದೆ. ಇದರಲ್ಲಿ 18 ಸರ್ಕಾರಿ ಉದ್ಯೋಗಿಗಳು, 7 ಪ್ರತ್ಯಕ್ಷದರ್ಶಿಗಳು, 12 ಪೊಲೀಸ್ ಸಿಬ್ಬಂದಿಗಳು ಸೇರಿದ್ದಾರೆ.
ಮಾರಣಾಂತಿಕ ಕಾಯಿಲೆ ಪೀಡಿತನಿಗೆ ಡಾನ್ ಆಗುವ ಆಸೆ
ಜಗದೀಶ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಹರೀಶ್ ಬಾಬು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಡಾನ್ ಆಗುವ ಆಸೆಯಿಂದ ಎಸ್ ಐಯನ್ನೇ ಕೊಂದುಬಿಟ್ಟರುವುದಾಗಿ ತನಿಖೆ ವೇಳೆ ಪೊಲೀಸರಿಗೆ ಹೇಳಿದ್ದಾರೆ. ಪಿಎಸ್ ಐ ಹಂತಕರು ತನಿಖೆಯ ವೇಳೆ ಹಲವು ರಹಸ್ಯಗಳನ್ನು ಬಿಚ್ಚಿಟ್ಟಿರುವುದು ಆರೋಪಪಟ್ಟಿಯಲ್ಲಿ ದಾಖಲಾಗಿದೆ.