ಜಿಲ್ಲಾ ಸುದ್ದಿ

ಕನ್ನಡಿಗರೇ ಕನ್ನಡದ ದ್ರೋಹಿಗಳು: ವೆಂಕಟಾಚಲ ಶಾಸ್ತ್ರಿ

Manjula VN

ಬೆಂಗಳೂರು: ಮಾತೃ ಭಾಷೆ ಕನ್ನಡದ ದ್ರೋಹಿಗಳು ಕನ್ನಡಿಗರೇ ಆಗಿದ್ದಾರೆ ಎಂದು ವಿಮರ್ಶಕ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.

ಪದಾರ್ಥ ಚಿಂತಾಮಣಿ ಭಾನುವಾರ ವಾಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪದಕಮ್ಮಟ-2016 ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರಿಂದಲೇ ಕನ್ನಡ ವಿನಾಶದ ಅಂಚಿಗೆ ತಲುಪುತ್ತಿದೆ. ಮಾತೃಭಾಷೆಯ ಬಳಕೆ, ಕಾಗುಣಿತ ದೋಷ, ಅಲ್ಪ ಪ್ರಾಣಮಹಾ ಪ್ರಾಣದಲ್ಲಿ ವ್ಯತ್ಯಾಸ ಸೇರಿದಂತೆ ಅನೇಕ ಕಾರಣಗಳಿಂದ ಶೇ.90ರಷ್ಟು ಅನಾರೋಗ್ಯದಿಂದ ಬಳಲುತ್ತಿದೆ. ಕನ್ನಡದಲ್ಲಿ ಒಳ್ಳೆಯ ಶಬ್ದಗಳು ಇದ್ದರೂ, ಬೇಕಾಬಿಟ್ಟಿಯಾಗಿ ಎಳೆದಾಡುತ್ತಿರುವುದರಿಂದ ಜೀವಂತವಾಗಿ ಉಳಿಯುವುದು ಅನುಮಾನವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕನ್ನಡದ ಬಗ್ಗೆ ಎಷ್ಟು ಪ್ರೀತಿ ಇರುತ್ತದೆಯೋ ಅಷ್ಟು ಒಳ್ಳೆಯದು. ಸಾಹಿತಿ ಬಿ.ಎ.ಶ್ರೀಕಂಠಯ್ಯ ಅವರಂತೆ ಕನ್ನಡವನ್ನು ಅತ್ಯಂತ ಸರಳವಾಗಿ ಹಿಂದೆ ಬರೆದವರಿಲ್ಲ ಮತ್ತು ಮುಂದೆ ಬರೆಯುವವರು ಸಿಗುವುದೂ ಇಲ್ಲ. ನಮ್ಮ ಎದುರಿಗಿರುವ ವ್ಯಕ್ತಿಗೆ ಕನ್ನಡ ಇಷ್ಟವಿದ್ದರೂ, ಇಲ್ಲದಿದ್ದರೂ, ಸರಳವಾಗಿ ಅರ್ಥವಾಗುವಂತೆ ಮಾತನಾಡಬೇಕು. ಬಹುತೇಕರು ಮಹಾಪ್ರಾಣವನ್ನೇ ಬಳಸುವುದಿಲ್ಲ. ಯಾವ ಸಂದರ್ಭದಲ್ಲಿ ಹಾಗೂ-ಮತ್ತು ಮಳಸಬೇಕು ಎನ್ನುವುದೇ ಅನೇಕರಿಗೆ ಗೊತ್ತಿಲ್ಲ.

ಮುಖ್ಯವಾಗಿ ಜಾಹೀರಾತು ಪ್ರಪಂಚದಲ್ಲಿ ಕನ್ನಡ ಭಾಷೆ ಸಂಪೂರ್ಣ ಕೆಟ್ಟು ಹೋಗಿದೆ. ಹೀಗಾಗಿ ಸರ್ಕಾರ ಒಂದು ಸಮಿತಿ ರಚಿಸಿ, ಜಾಹೀರಾತುಗಳಲ್ಲಿ ಕನ್ನಡವನ್ನು ತಪ್ಪಾಗಿ ಬಳಸುವವರಿಗೆ ದಂಡ ವಿಧಿಸಬೇಕು ಎಂದು ವೆಂಕಟಾಚಲ ಶಾಸ್ತ್ರೀ ಸಲಹೆ ನೀಡಿದರು.

ಸಾಹಿತಿ ಡಾ.ವಸಂತಕುಮಾರ ಪೆರ್ಲ ಮಾತನಾಡಿ, ಅನೇಕ ಕಾರಣಗಳಿಂದ ನಮ್ಮ ಭಾಷೆ ದೇಶಿಯತೆಯನ್ನೇ ಕಳೆದುಕೊಳ್ಳುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ತಲೆಮಾರಿಗೆ ಕನ್ನಡದಲ್ಲಿ ವಿಚಾರಗಳನ್ನು ಮುಟ್ಟಿಸಲು ಹೇಗೆ ಸಾಧ್ಯ? ಹೀಗಾಗಿ ದೇಶಿಯತೆಯನ್ನು ಉಳಿಸಿಕೊಳ್ಳುವ ಜೊತೆಗೆ, ಆಚಾರ ಮತ್ತು ವಿಚಾರ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ನೋಟಿಸ್ ಬಂದಿದೆ
ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತನಾಡುತ್ತಿದ್ದ ವೆಂಕಟಾಚಲ ಶಾಸ್ತ್ರಿ ಅವರಿಗೆ ಭಾಷಣ ಮುಗಿಸುವಂತೆ ಕಾರ್ಯಕ್ರಮ ಆಯೋಜಕರಿಂದ ವಿಷಯ ಮುಟ್ಟಿತು. ಹೀಗಾಗಿ ತಮ್ಮ ಭಾಷಣ ಸಮಯದಲ್ಲಿ `ಮಾತು ಮುಗಿಸುವಂತೆ ತಮಗೆ ನೋಟಿಸ್ ಬಂದಿದ್ದು, ಇನ್ನು ಹೆಚ್ಚು ಮಾತನಾಡಲು ಸಾಧ್ಯವಿಲ್ಲದೆ. ಈ ನೋಟಿಸ್ ನಿರ್ಲಕ್ಷಿಸಿದರೆ, ಭಾಷಣ ಕೇಳುವವರೇ ತಮ್ಮನ್ನು ವೇದಿಕೆಯಿಂದ ಕಳುಹಿಸಬಹುದು' ಎಂದು ಹೇಳಿದರು. ಇದನ್ನು ಕೇಳಿದಾಗ ಸಭಾಂಗಣದಲ್ಲಿವರು ಕೆಲಕಾಲ ನೆಗೆಯಲ್ಲಿ ತೇಲಿದರು.

SCROLL FOR NEXT