ಬೆಂಗಳೂರು: ಹಿಂಬದಿ ಸವಾರರಿಗೂ ಹೆಲ್ಮೆಟ್ ಧರಿಸಬೇಕೆಂಬ ಕಡ್ಡಾಯ ನಿಯಮ ಉಲ್ಲಂಘಿಸಿದ ಬೈಕ್ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಸಾರಿಗೆ ಪೊಲೀಸರು ತೀವ್ರಗೊಳಿಸಿದ್ದು, ಗುರುವಾರ ಹೆಲ್ಮೆಟ್ ಧರಿಸದೇ ಸವಾರಿ ಮಾಡುತ್ತಿದ್ದ ಐದು ಸಾವಿರಕ್ಕೂ ಹೆಚ್ಚು ಸವಾರರು ದಂಡ ತೆತ್ತಿದ್ದಾರೆ.
ಸರ್ಕಾರದ ನಿಯಮ ಮೀರಿ, ಹಿಂಬದಿ ಸವಾರರಿಗೆ ಹೆಲ್ಮೆಟ್ ಹಾಕಿಸದೆ ಬೈಕ್ ಸವಾರಿ ಮಾಡುತ್ತಿದ್ದ ಸುಮಾರು 5,861 ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಗುರುವಾರ ದಂಡ ವಿ ಧಿಸಿದ್ದಾರೆ.
ನಗರದ ಪೂರ್ವ ಹಾಗೂ ಪಶ್ಟಿಮ ವಿಭಾಗಗಳಲ್ಲಿನ ವಿವಿಧ ಸ್ಥಳಗಳಲ್ಲಿ ಸಾರಿಗೆ ಇಲಾಖೆ ಹಾಗೂ ನಗರ ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಪೂರ್ವ ವಿಭಾಗದಲ್ಲಿ 2,924 ಮತ್ತು ಪಶ್ಚಿಮ ವಿಭಾಗದಲ್ಲಿ 2,937 ಸೇರಿದಂತೆ 5,861 ಚಾಲಕರ ವಿರುದ್ಧ ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರಿಂದ ಹೆಲ್ಮೆಟ್ ಖರೀದಿಗಾಗಿ ಸಂಚಾರ ಪೊಲೀಸರು ಜನವರಿ 20ರವರೆಗೆ ಗಡುವು ನೀಡಿದ್ದರು.
ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಬುಧವಾರ ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ಮೊದಲ ದಿನವೇ 1,520 ವಾಹನ ಸವಾರರಿಗೆ ದಂಡ ವಿಧಿಸಿದ್ದರು.