ಬೆಂಗಳೂರು: ತಪಾಸಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಬೈಕ್ ಸವಾರರನ್ನು ಬೈಕ್ ನಲ್ಲೇ ಬೆನ್ನಟ್ಟಿದ ಇಬ್ಬರು ಪೊಲೀಸ್ ಪೇದೆಗಳಿಗೆ ರಾಜಭವನ ಸಮೀಪದ ತಿಮ್ಮಯ್ಯ ವೃತ್ತದಲ್ಲಿ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಶಿವಾಜಿನಗರ ಠಾಣೆ ಪೊಲೀಸ್ ಪೇದೆ ಜಯಣ್ಣ ಅವರ ಕಾಲು ಮುರಿದಿದ್ದು, ಮಂಜುನಾಥ್ ರ ಪಕ್ಕೆಲುಬಿಗೆ ಹಾನಿಯಾಗಿದೆ. ಅದೃಷ್ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಾಜಿನಗರ ಠಾಣೆ ಪೊಲೀಸರು ರಾತ್ರಿ ಕ್ವೀನ್ಸ್ ರಸ್ಯೆಯಲ್ಲಿ ಅನುಮಾನಾಸ್ಪದ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದರು. ಮುಂಜಾನೆ 3.30ರ ಸುಮಾರಿಗೆ ಅದೇ ಮಾರ್ಗದಲ್ಲಿ ಬೈಕ್ ಬಂದಿದೆ. ಈ ಬೈಕ್ ನಲ್ಲಿ ನಂಬರ್ ಫ್ಲೇಟ್ ಇಲ್ಲದನ್ನು ಗಮನಿಸಿದ ಪೊಲೀಸರು ಸವಾರರಿಗೆ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದಾರೆ. ಕೂಡಲೇ ಇಬ್ಬರೂ ಬೈಕ್ ನಲ್ಲಿ ಬೆನ್ನಟ್ಟಿದ್ದಾರೆ. ತಿಮ್ಮಯ್ಯ ವೃತ್ತದವರೆಗೂ ಹಿಂಬಾಲಿಸಿದ ಪೊಲೀಸರಿಗೆ ಆರೋಪಿಗಳ ಬೈಕ್ ಸಿಗಲಿಲ್ಲ. ಬಳಿಕ ಪೇದೆಗಳು ರಾಜಭವನದ ಮಾರ್ಗವಾಗಿ ಕ್ವೀನ್ಸ್ ರಸ್ತೆಗೆ ವಾಪಸಾಗುವಾಗ ಏರ್ ಪೋರ್ಟ್ ರಸ್ತೆಯಿಂದ ವೇಗವಾಗಿ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.