ಲೋಡ್ಶೆಡ್ಡಿಂಗ್ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಏ.1
ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕಂಗಾಲಾಗಿರುವ ಜನ ಪ್ರತಿಭಟನೆಗೆ ಮುಂದಾಗಿದ್ದಾರೆ. ನಿರಂತರ ಲೋಡ್ಶೆಡ್ಡಿಂಗ್ನಿಂದಾಗಿ ಕಂಗೆಟ್ಟಿರುವ ನಾಗರಿಕರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ದೊಡ್ಡಬಳ್ಳಾಪುರ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರ ಬಳಿ ಇರುವ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಹಲವಾರು ರೈತರು, ವಿವಿಧ ಸಂಘಟನೆಗಳ ಮುಖಂಡರು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಜನ ತೀವ್ರ ನಷ್ಟವನ್ನು ಅನುಭವಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ 6 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವವಾಗಿ 2 ಗಂಟೆಯ ಕಾಲವೂ ಸಮರ್ಪಕವಾಗಿ ಕೊಡುತ್ತಿಲ್ಲ. ಈಗ ಪರೀಕ್ಷಾ ಸಮಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಓದಲೂ ತೊಂದರೆಯಾಗುತ್ತಿದೆ. ಕೆರೆ-ಕುಂಟೆಗಳು ಒಣಗಿದ್ದು, ಬೆಳೆಗಳಿಗೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಕೊಳವೆ ಬಾವಿಯಿಂದ ನೀರೆತ್ತಲು ಪಂಪ್ಸೆಟ್ಗಳಿಗೆ ಕೂಡ ಸಮರ್ಪಕ ವಿದ್ಯುತ್ ಸರಬರಾಜಾಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜನರ ಅಹವಾಲು ಕೇಳುವವರೇ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಓದಲು ಸಾಧ್ಯವಾಗುತ್ತಿಲ್ಲ: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ರಾತ್ರಿಯ ವೇಳೆಯಲ್ಲಿ ಕೂಡ ಓದಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಹುಡುಗಾಟವಾಡುತ್ತಿರುವ ವಿದ್ಯುತ್ ಇಲಾಖೆ ಕೂಡಲೇ ಅಸಮರ್ಪಕ ವಿದ್ಯುತ್ ಕಡಿತ ರದ್ದುಗೊಳಿಸಬೇಕು. ಲಭ್ಯ ವಿದ್ಯುತ್ ಅನ್ನು ವ್ಯವಸ್ಥಿತ ರೀತಿಯಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸರಬರಾಜು ನಿಲ್ಲಿಸುವ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ವಿದ್ಯುತ್ ಬಿಲ್ ಕಟ್ಟುವುದು 1 ದಿನ ತಡವಾದರೂ ಬಂದು ಸಂಪರ್ಕ ಕಡಿತಗೊಳಿಸುವ ಅಧಿಕಾರಿಗಳು ಸರಿಯಾಗಿ ವಿದ್ಯುತ್ ಸರಬರಾಜು ಮಾಡುವ ಹೊಣೆಗಾರಿಕೆಯಿಂದ ಮಾತ್ರ ನುಣುಚಿಕೊಳ್ಳುವುದು ಸರಿಯಲ್ಲ ಎಂದರು. ಬೇಡಿಕೆಗೆ ಪೂರಕ ಸ್ಪಂದನೆ ಸಿಗದೆ ಸ್ಥಳದಿಂದ ಹೋಗಲ್ಲ ಎಂದು ಪಟ್ಟು ಹಿಡಿದ ರೈತ ಮುಖಂಡರಿಗೆ ಬೆಸ್ಕಾಂ ಅಧಿಕಾರಿಗಳು ಕೂಡಲೇ ಈ ಕುರಿತು ಮೇಲಧಿಕಾರಿಗಳಿಗೆ ವಿಷಯ ತಿಳಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮನವಿ ಮಾಡಲಾಗುವುದು. ನಿಗಧಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಡಾ.ಸಿ.ಎಸ್.ಶ್ರೀನಿವಾಸ್ ಸೇರಿದಂತೆ ರಾಜ್ಯ ರೈತ ಸಂಘದ, ಹಸಿರುಸೇನೆ, ರೈತ ವಿದ್ಯಾರ್ಥಿ ಸೇನೆ ಸೇರಿದಂತೆ ಹಲವು ಘಟಕಗಳ ಹತ್ತಾರು ರೈತ ಮುಖಂಡರು ಭಾಗವಹಿಸಿದ್ದರು.