ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ವೋಟಿಂಗ್ ಕಡ್ಡಾಯ'

Rashmi Kasaragodu
Updated On : 2 Apr 2013, 12:13 pm

ಮಾಗಡಿ:  ಮತದಾನ ಪವಿತ್ರವಾದುದು, ಚುನಾವಣೆ ವೇಳೆ ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಹಸೀಲ್ದಾರ್  ಡಾ. ಹರೀಶ್ ನಾಯಕ್ ನುಡಿದರು.   ಅವರು ಮಾಗಡಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ  ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ವತಿಯಿಂದ ಮತದಾರರ ಜಾಗೃತಿ ಮತ್ತು ವ್ಯವಸ್ಥೆಯಲ್ಲಿ ಶಿಕ್ಷಣ ಹಾಗೂ ಸಹಭಾಗಿತ್ವದ ಅರಿವು  ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಸೈಕಲ್ ಜಾತಾ ಮತ್ತು ಪಿಡಿಓಗಳ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಾ  ಮತದಾರರು ತಪ್ಪದೆ ಮತದಾನ ಮಾಡಬೇಕು ಎಂದು ಮತದಾನದ ಪಾವಿತ್ರ್ಯತೆಯ ಕುರಿತು ಸುದೀರ್ಘವಾಗಿ ತಿಳಿಸಿಕೊಟ್ಟರು.   ನಂತರ ಕಲ್ಯಗೇಟ್ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಲಾಗಿತ್ತು. ನಂತರ ಪಟ್ಟಣದಪ್ರಮುಖ ಬೀದಿಯಲ್ಲಿ  ಜನಜಾಗೃತಿ ಮೂಡಿಸು  ಜಾಥಾ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.   ಬಿಇಓ ರಂಗಸ್ವಾಮಿ, ತಾ.ಪಂ. ಇಓ ಕೆ.ಬಿ. ಅಕ್ಕೋಜಿ, ಚುನಾವಣಾ ಶಿರಸ್ತೇದಾರ್  ಎನ್.ಶಿವಕುಮಾರ್, ತಾಲೂಕು ಕಚೇರಿಯ ರೆವಿನ್ಯೂ ಅಧಿಕಾರಿಗಳಾದ ಗುರುಲಿಂಗಪ್ಪ, ಮಹಾದೇವಯ್ಯ, ಮಹಾಲಿಂಗಪ್ಪ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಜಯರಾಮು, ಕೃಷಿ ಸಹಾಯಕ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಆರ್. ಮಂಜನಾಥ್, ಆರ್.ಓ. ಗುರುನಾಥ್, ನಂದೀಶ್, ನಾಗಯ್ಯ ಇತರರು ಇದ್ದರು.

ಮಗು ಸಾವು: ದೂರು
ಕನಕಪುರ: ಖಾಸಗಿ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿರುವ ಘಟನೆ ಕನಕಪುರದಲ್ಲಿ ಸೋಮವಾರ ಸಂಭವಿಸಿದೆ. ಪಟ್ಟಣದ ಮೇಗಳ ಬೀದಿಯ ನಾಗೇಶ್ ಎಂಬುವರ ಪುತ್ರಿ ಹರಿಪ್ರಿಯ ಸಾವನ್ನಪ್ಪಿದ ಬಾಲಕಿ. ಅನಾರೋಗ್ಯಪೀಡಿತ ಬಾಲಕಿಯನ್ನು ಭಾನುವಾರ ಚಿಕಿತ್ಸೆಗಾಗಿ ಪಟ್ಟಣದ ರಾಮನಗರ ರಸ್ತೆಯಲ್ಲಿರುವ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಬಾಲಕಿಗೆ ಚುಚ್ಚುಮದ್ದು ನೀಡಿದ್ದರು. ಸೋಮವಾರ ಬಾಲಕಿ ಕೊನೆಯುಸಿರೆಳೆದಳು. ಇದರಿಂದ ರೊಚ್ಚಿಗೆದ್ದ ಮೃತಳ ಪೋಷಕರು ಮತ್ತು ಸಂಬಂಧಿಕರು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿ, ಬಾಲಕಿಯ ಸಾವಿಗೆ ವೈದ್ಯರ ನಿರ್ವಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಕನಕಪುರ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಳೆ ಎನ್ನೆನ್ನೆಸ್ ಶಿಬಿರ
ದೊಡ್ಡಬಳ್ಳಾಪುರ: ತಾಲೂಕಿನ ಕೋಲಿಗೆರೆಯ ಸತೀಶ್ಚಂದ್ರ ಶಿಕ್ಷಕರ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಚಿಕ್ಕಬೆಳವಂಗಲ ಗ್ರಾಮದಲ್ಲಿ 7 ದಿನಗಳ ವಿಶೇಷ ವಾರ್ಷಿಕ ಸೇವಾ ಶಿಬಿರ ನಡೆಯಲಿದೆ. ಏ.3ರಂದು ಬುಧವಾರ ಬೆಳಗ್ಗೆ 11.30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಗೃಹಿಣಿ ಆತ್ಮಹತ್ಯೆ
ಬೆಂಗಳೂರು: ರಾಜರಾಜೇಶ್ವರಿ ನಗರದ ಪಟ್ಟಣಗೆರೆ ನಿವಾಸಿ ಶ್ಯಾಮಲಾ(28) ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಇದಕ್ಕೆ ಕಾರಣ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ಶ್ಯಾಮಲಾ ಅವರು ಭಾನುವಾರ ರಾತ್ರಿ ನೇಣುಹಾಕಿಕೊಂಡಿದ್ದಾರೆ. ಸೋಮವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಪತಿ ಅವಿನಾಶ್ ಹಾಗೂ ಅತ್ತೆ ಲೀಲಾವತಿ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದುದು ಬೆಳಕಿಗೆ ಬಂದಿದೆ.
ವಿವಾಹದ ವೇಳೆ ಅಳಿಯ ಅವಿನಾಶ್‌ಗೆ ನಗದು ನೀಡಲಾಗಿತ್ತು. ಇತ್ತೀಚೆಗೆ ರಾಮಮೂರ್ತಿ ನಗರದಲ್ಲಿ ಮನೆ ಕಟ್ಟಿಕೊಡಲಾಗಿತ್ತು. ಆದರೂ ಹಣಕ್ಕಾಗಿ ಪೀಡಿಸುತ್ತಿದ್ದರು. ಕಿರುಕುಳದಿಂದ ಬೇಸತ್ತು ಶ್ಯಾಮಲಾ ನೇಣು ಹಾಕಿಕೊಂಡಿರುವುದಾಗಿ ತಂದೆ ಬಸಪ್ಪ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ರಾಮಮೂರ್ತಿ ನಗರದ ನಿವಾಸಿಯಾಗಿದ್ದ ಶ್ಯಾಮಲಾ ರಾಜರಾಜೇಶ್ವರಿ ನಗರದ ಬಿಎಚ್‌ಇಎಲ್‌ನ ಅವಿನಾಶ್ ಅವರ ವಿವಾಹ ಮೂರು ವರ್ಷದ ಹಿಂದೆ ನೆರವೇರಿತ್ತು. ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಅವಿನಾಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement