ಬೃಹತ್ ಹಳ್ಳಿ ಮರ ಉರುಳಿ ಅಂಗಡಿಗಳಿಗೆ ಹಾನಿ
ಹೊಸಕೋಟೆ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸರ್ಕಾರಿ ಗ್ರಂಥಾಲಯದ ಪಕ್ಕದಲ್ಲಿರುವ ಸುಮಾರು 75 ವರ್ಷ ಹಳೆಯ ಬೃಹತ್ ಮರ ಉರುಳಿ ಬಿದ್ದು ಸೈಕಲ್ ಶಾಪ್, ಹಣ್ಣಿನ ಅಂಗಡಿ ಮತ್ತು ಮೂರು ಚಿಲ್ಲರೆ ಅಂಗಡಿಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಒಬ್ಬ ಚಿಲ್ಲರೆ ಅಂಗಡಿ ಬಾಲಕನಿಗೆ ಕಾಲು ಮುರಿದಿದ್ದು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯುತ್ ತಂತಿಗಳ ಸಮೇತ ತುಂಡಾಗಿ ಬಿದ್ದು ಮೂರು ಕಂಬಗಳಿಗೆ ಹಾನಿಯಾಗಿದ್ದು ಸಂಬಂದಪಟ್ಟ ಬೆಸ್ಕಾಂ ಅಧಿಕಾರಿಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಟ್ಟಣದಲ್ಲಿ ಸಂಭವಿಸಿದ ಮಳೆ ಮತ್ತು ಗಾಳಿ ಪ್ರಭಾವದಿಂದ ಮರ ಉರುಳಿ ಬಿದ್ದಿದ್ದು ಹಲವಾರು ಜನ ಅಂಗಡಿಗಳ ಮುಂದೆ ನಿಂತಿದ್ದು ಆಕಸ್ಮಿಕವಾಗಿ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದವರು ಆಗಮಿಸಿ ಸ್ಥಳವನ್ನು ಪರಿಶೀಲಿಸಿದರು.