ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗೋಲ್ಮಾಲ್ ಕೈಚಳಕದವರು ಕಾಂಗ್ರೆಸ್ ಟಿಕೆಟ್ ವಾರಸುದಾರರು: ಶಾಸಕ ಎಚ್.ಸಿ. ಬಾಲಕೃಷ್ಣ ಲೇವಡಿ

Rashmi Kasaragodu
Updated On : 4 Apr 2013, 12:39 pm

ಕ.ಪ್ರ. ವಾರ್ತೆ   ರಾಮನಗರ   ಏ.3
ಪಹಣಿ ತಿದ್ದಿ ಯಾರದೋ ಹೆಸರಿನ ಆಸ್ತಿಯನ್ನು ಇನ್ಯಾರದೋ ಹೆಸರಿಗೆ ಕಾಣಿಸಿ ಗೋಲ್ಮಾಲ್ ಮಾಡಿದವರು, ರಿಯಲ್ ಎಸ್ಟೇಟ್ ದಂಧೆಯಲ್ಲಿ ಕೈಚಳಕ ತೋರಿದವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ವಾರಸುದಾರರು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಲೇವಡಿ ಮಾಡಿದರು.  
ನಗರದ ಮಂಜುನಾಥ ಕನ್ವೆನ್ಷನ್ಹಾಲ್ ಆವರಣದಲ್ಲಿ ಬುಧವಾರ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೂಟಗಲ್ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ನಿಮ್ಮ ಜಮೀನಿನ ಖಾತೆಗಳು ಬೇರೆ ಯಾರದೋ ಹೆಸರಿಗೆ ಹೋಗಿ ಮಾರಾಟ ಆಗಬಹುದೆಂದು ಹೇಳಿದರು.  ಗ್ರಾಮ ಲೆಕ್ಕಿಗ ಆಗಿದ್ದವರೊಬ್ಬರು ಖಾತೆಗಳನ್ನು ಯಾರದೋ ಹೆಸರಿಗೆ ಕೂರಿಸಿ, ಮಾಲೀಕರಿಗೇ ಗೊತ್ತಿಲ್ಲದಂತೆ ಸಾಕಷ್ಟು ಜಮೀನನ್ನು ಕ್ರಯ ಮಾಡಿಸಿದ್ದಾರೆ. ರಾಜಕೀಯ ಮುಖಂಡರೊಬ್ಬರ ಕಾರು ಚಾಲಕ ಆಗಿದ್ದವರೊಬ್ಬರು ರಿಯಲ್ ಎಸ್ಟೇಟ್ ದಂಧೆಯಿಂದ ಹಣ ಗಳಿಸಿ, ರಾಜಕಾರಣಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇಂತಹವರ ಬಗ್ಗೆ ಎಚ್ಚರ ವಹಿಸಿ ಎಂದರು.
ಬಹಿರಂಗ ಚರ್ಚೆಗೆ ಆಹ್ವಾನ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ 20 ತಿಂಗಳ ಅಧಿಕಾರಾವಧಿಯಲ್ಲಿ ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಿಸಿ, ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ಅಭಿವೃದ್ಧಿ ವಿಷಯದಲ್ಲಿ ಯಾವ ಪಕ್ಷದ ಕೊಡುಗೆ ಎಷ್ಟು ಎನ್ನುವ ಬಗ್ಗೆ ಕಾಂಗ್ರೆಸಿಗರು ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಾಲಕೃಷ್ಣ ಪಂಥಾಹ್ವಾನ ನೀಡಿದರು.  ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಕೊಡುಗೆ ಹೆಚ್ಚು ಎನ್ನುವುದನ್ನು ಆ ಪಕ್ಷದ ಮುಖಂಡರು ಸಾಬೀತು ಪಡಿಸಿದಲ್ಲಿ ನಾನೂ ಸೇರಿದಂತೆ ಜೆಡಿಎಸ್ ಹುರಿಯಾಳುಗಳು ಸ್ಪರ್ಧಾ ಕಣದಿಂದ ಹಿಂದೆ ಸರಿದು, ಆ ಪಕ್ಷದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಎಚ್ಡಿಕೆಗೆ ಶಕ್ತಿ ತುಂಬಿ: 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಕೊಡುಗೆ ಈ ಜಿಲ್ಲೆಯಲ್ಲಿ ಶೂನ್ಯ. ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ ಸಹಿತ ಎಲ್ಲ ವಿಷಯದಲ್ಲೂ ಕುಮಾರಸ್ವಾಮಿ ಕೊಡುಗೆ ಅನನ್ಯ. ಜಿಲ್ಲೆಯ ಮತದಾರರು ಜೆಡಿಎಸ್ ಬೆಂಬಲಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರಲು ಹೊರಟಿರುವ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಬೇಕು ಎಂದು ಬಾಲಕೃಷ್ಣ ಮನವಿ ಮಾಡಿದರು.
ಜನಪರವಾದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಲ್ಲದೆ ಬಡವರು, ಶ್ರಮಿಕರು ಮತ್ತು ಶೋಷಿತರ ಧ್ವನಿಯಾದ ಕುಮಾರಸ್ವಾಮಿ ಅವರು ಹಳೆಯ ಮೈಸೂರು ಭಾಗಕ್ಕೆ ಸೀಮಿತವಲ್ಲ. ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ಪರ ಅಲೆ ಎದ್ದಿದೆ. ಈ ಬಾರಿ ಜೆಡಿಎಸ್ ಸರ್ಕಾರ ರಚನೆ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರ, ತಾ.ಪಂ. ಅಧ್ಯಕ್ಷೆ ಭಾನುಮತಿ, ಸದಸ್ಯರಾದ ಪುಟ್ಟರಂಗಯ್ಯ, ಶಿವಪ್ರಸಾದ್, ಪ್ರಾಣೇಶ್, ಜೆಡಿಎಸ್ ಮುಖಂಡರಾದ ಬ್ಯಾಟಪ್ಪ, ಸುಮಿತ್ರಮ್ಮ, ಶಿವಲಿಂಗೇಗೌಡ, ಅಶ್ವತ್ಥ್, ರಾಮಯ್ಯ ಮತ್ತಿತರರು ಭಾಗವಹಿಸಿದ್ದರು.


ಸೂಟು ಹೊಲಿಸಿಕೊಂಡಿದ್ದಾರೆ
ಮುಖ್ಯಮಂತ್ರಿ ಸ್ಥಾನದ ಕನಸು ಕಂಡಿರುವ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಸೂಟು ಹೊಲಿಸಿಕೊಂಡು ರೆಡಿಯಾಗಿದ್ದಾರೆ. ತಮ್ಮ ಬೆಂಬಲಿಗರಿಗೇ ಟಿಕೆಟ್ ಕೊಡಿಸಬೇಕೆಂದು ದೆಹಲಿಯಲ್ಲಿ ಮುಖಂಡರು ಕಚ್ಚಾಡುತ್ತಿದ್ದಾರೆ. ಆ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರು ಅಳುತ್ತಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಸ್ತಿಯೂ ನಡೆಯುತ್ತಿದೆ. ಕಾಂಗ್ರೆಸ್ಗೆ ಅಧಿಕಾರವೇನಾದರೂ ಸಿಕ್ಕರೆ ಇನ್ನೈದು ವರ್ಷವೂ ರಾಜ್ಯದಲ್ಲಿ ಬಯಲು ನಾಟಕ ಗ್ಯಾರಂಟಿ ಎಂದು ಬಾಲಕೃಷ್ಣ  ಛೇಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement