ಮಂಚನಬೆಲೆ ಜಲಾಶಯ: ಮೋಜು, ಮಸ್ತಿಗೆ ಬಂದು ಅಪಾಯಕ್ಕೆ ಸಿಲುಕುವವರ ಸಂಖ್ಯೆ ಅಧಿಕ
ಕ.ಪ್ರ. ವಾರ್ತೆ ಮಾಗಡಿ ಏ.3
ಮೋಜು ಮಸ್ತಿ, ಪಿಕ್ನಿಕ್ ಎಂದು ಮಂಚನಬೆಲೆ ಜಲಾಶಯಕ್ಕೆ ಬರುವುದು, ಹಿನ್ನೀರಿಗಿಳಿದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ.
ಮಂಚನಬೆಲೆ ಜಲಾಶಯ ಕಾವೇರಿ ನೀರಾವರಿ ನಿಗಮಕ್ಕೆ ಒಳಪಟ್ಟಿದೆ. ಈ ಜಲಾಶಯದಿಂದಲೇ ಮಾಗಡಿ ಪಟ್ಟಣ ಸೇರಿದಂತೆ ತಾಲೂಕಿನ ಸುಮಾರು 60 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಮಾಗಡಿ ತಾಲೂಕಿನ ಸಾವನದುರ್ಗದ ತಪ್ಪಲ್ಲಿನ ಸುಂದರ ರಮ್ಯ ತಾಣದಲ್ಲಿ ಮಂಚನಬೆಲೆ ಜಲಾಶಯವಿದೆ. ಬೆಂಗಳೂರು ಸುತ್ತಮುತ್ತಲ ಕಾಲೇಜು ಯುವಕ, ಯುವತಿಯರು, ಪ್ರೇಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೋಜು,ಮಸ್ತಿ ಎಂದು ಇಲ್ಲಿಗೆ ಬರುತ್ತಾರೆ. ಮೋಜು ಮಸ್ತಿ ಮಾಡಿ ಕುಡಿದು, ಕುಪ್ಪಳ್ಳಿಸುವುದು ಸಾಲದೆಂಬಂತೆ ಈಜಲು ಜಲಾಶಯದ ಹಿನ್ನೀರಿಗಿಳಿದು ಈಜಲಾಗದೆ ಅಪಾಯಕ್ಕೆ ಸಿಲುಕಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ.ನಿಷೇಧ ಸ್ಥಳ: ಜಲಾಶಯದ ವೀಕ್ಷಣೆಗೆಂದು ಬರುವವರಿಗೆ ಜಲಾಶಯ ವೀಕ್ಷಣೆ ಪ್ರವೇಶ ನಿಷೇಧಿಸಿದೆ. ಆದರೂ ಪಿಕ್ನಿಕ್ ಎಂದು ಇಲ್ಲಿಗೆ ಬರುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ, ಕಾರು, ವ್ಯಾನ್ಗಳಲ್ಲಿ ತಂಡೊಪತಂಡವಾಗಿ ಬರುತ್ತಾರೆ. ಜಲಾಶಯದ ಹಿನ್ನೀರಿನ ಅಂಗಳದಲ್ಲಿ ಕುಳಿತು ಮೋಜು ಮಸ್ತಿ ಮಾಡುವುದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಹರಸಾಹಸ ವ್ಯರ್ಥವಾಗಿದೆ. ಇಲ್ಲಿ ಕಾವಲುಗಾರರಿದ್ದಾರೆ, ಇದ್ದರೂ ಪ್ರಯೋಜವಿಲ್ಲ.
ಮದ್ಯದ ಕಾಲಿ ಬಾಟೆಲ್, ಪ್ಲಾಸ್ಟಿಕ್ ಕಾಗದ, ಇತರೆ ತ್ಯಾಜ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಬಿಟ್ಟು ಹೋದ ತ್ಯಾಜಗಳು ಜಲಾಶಯದ ನೀರಿಗೆ ಸೇರಿ ನೀರು ಕಲುಷಿತವಾಗುತ್ತಿದೆ. ಸಂಬಂಧಪಟ್ಟ ಜಲಾಶಯದ ಅಧಿಕಾರಿಗಳು, ಪೊಲೀಸರು ಒಟ್ಟಾಗಿ ಸೇರಿ ಜಲಾಶಯದ ಸುತ್ತ ರಕ್ಷಣೆ ಮಾಡದಿದ್ದರೆ, ಮೋಜ ಮಸ್ತಿಗೆ ಕಡಿವಾಣ ಹಾಕದಿದ್ದರೆ ಈ ಜಲಾಶಯ ಪ್ರವಾಸಿ ತಾಣವಾಗದೆ ಸಾವಿನ ತಾಣವಾಗುವುದರಲ್ಲಿ ಸಂಶಯವಿಲ್ಲ.