ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಸದಾ ಬದ್ಧ

Rashmi Kasaragodu
Updated On : 5 Apr 2013, 1:01 am

ಕ.ಪ್ರ. ವಾರ್ತೆ   ಮಾಗಡಿ   ಏ.4
ನಿಮ್ಮ ಮನೆಯ ಮಗ ನಾನು,  ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು ಸದಾ ಬದ್ಧನಾಗಿದ್ದೇನೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಕಾರ್ಯಕರ್ತ ಮತದಾರರಲ್ಲಿ ಮನವಿ ಮಾಡಿದರು.
ಅವರು ಇಲ್ಲಿನ ಜಮಾಲ್ ಸಾಬ್ ಪಾಳ್ಯದ ಬಳಿ ಏರ್ಪಡಿಸಿದ್ದ  ತಗ್ಗೀಕುಪ್ಪೆ (ಕಸಬಾ)ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತಬ್ಡಿ,  ಮಾಜಿ ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ  ಮುಖ್ಯಮಂತ್ರಿ ಆಗೇ ಆಗ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಗೆದ್ದು ಗದ್ದುಗೆ ಏರಿದ ಮೇಲೆ ಮೊದಲನೆಯದಾಗಿ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ 300 ಕೋಟಿ ರು. ಯೋಜನೆಯ ರಾಜೀವ್ ಗಾಂಧಿ ಆರೋಗ್ಯ ವಿವಿ  ಸ್ಥಾಪಿಸುವುದು, ನಂತರ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವುದು, 75 ರ ವಯೋವುತಿ ಮೀರಿದ ಎಲ್ಲರಿಗೂ 5 ಸಾವಿರ ರು. ಮಾಸಾಶನ ಯೋಜನೆಯನ್ನು  ಜಾರಿಗೊಳಿಸುವುದು ನಮ್ಮ ಗುರಿ. ಇಲ್ಲದಿದ್ದರೆ ಎಚ್‌ಡಿಕೆ ಸಮೇತ ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುತ್ತೇವೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ತುಲನೆ ಮಾಡಿ: ನನ್ನ ಮತ್ತು ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಕೊಡುಗೆಯನ್ನು ತುಲನೆ ಮಾಡೋಣ, ಯಾರು ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿರುವುದು ಎಂದು ಜನರೇ ತೀರ್ಮಾನಿಸಲಿ ಎಂದ ಬಾಲಕೃಷ್ಣ  ಕ್ಷೇತ್ರದಲ್ಲಿ ಎಚ್.ಎಂ. ರೇವಣ್ಣ ಅವರ ಕೊಡುಗೆ ಶೂನ್ಯ. ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಮಂಜೂರಾತಿ ಕೊಡಿಸಿದ್ದು ನನ್ನ ತಂದೆ ಎಚ್.ಜಿ. ಚನ್ನಪ್ಪ, ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ತರಲು ಎಚ್.ಡಿ. ದೇವೇಗೌಡರು ಹಣ ಬಿಡುಗಡೆ ಮಾಡಿದ್ದು ಎಂದರು.
ಮಾನನಷ್ಟ ಮೊಕದ್ದಮೆ: ಕ್ಷೇತ್ರದಲ್ಲಿ 600 ಕೋಟಿ ಹಗರಣದ ಬಗ್ಗೆ ಸದನ ಸಮಿತಿ ತೀರ್ಮಾನಿಸಲಿ. ನನ್ನದೇನಾದರೂ ಪಾತ್ರ ಇದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಇಲ್ಲದಿದ್ದರೆ ನನ್ನ ವಿರುದ್ಧ ಆರೋಪಿಸಿರುವವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಆತ್ಮಾವಲೋಕನ ಮಾಡಿಕೊಳ್ಳಲಿ: ಈ ಬಾರಿ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ನನಗೆ ಅನುಕೂಲವಾಗಿದೆ. ಮೀಸಲಾತಿ ಬದಲಾಗುತ್ತದೆ ಎಂದು ಹಿಂದಿನ ಪುರಸಭೆಯ ಸದಸ್ಯರು ಟೆಂಡರ್ ಮತ್ತು ಕಾಮಗಾರಿ ಕೆಲಸಕ್ಕೆ ಕೈಹಾಕಿದ್ದ ಪರಿಣಾಮ ಸೋಲು ಅನುಭವಿಸಬೇಕಾಯಿತು. ಅವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದರೆ ಈಗ ಕಾರ್ಯಕರ್ತರು ಜೆಡಿಎಸ್ ಗೆಲವಿಗೆ ಪಣ ತೊಟ್ಟಿ ನಿಂತಿದ್ದಾರೆ ಎಂದರು.
ಶಾಸಕಿ ಶ್ಲಾಘನೆ: ತಾಲೂಕು ಜೆಡಿಎಸ್  ಅಧ್ಯಕ್ಷ ಪೊಲೀಸ್ ರಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಗಡಿ ಮಣ್ಣಿನ ಮಗ ಎಚ್.ಸಿ.ಬಾಲಕೃಷ್ಣ  ಬೇಕೋ,  ಮಂಜುನಾಥ್ ಬೇಕೋ ಮತದಾರರೇ ನಿರ್ಣಯ ಮಾಡಲಿ ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಶಾಸಕಿ  ಅನಿತಾಕುಮಾರಸ್ವಾಮಿ ಅವರೇ, ಶಾಸಕ ಎಚ್.ಸಿ.  ಬಾಲಕೃಷ್ಣ ಅವರ  ಕ್ಷೇತ್ರದ ಅಭಿವೃದ್ಧಿ  ಕಾಮಗಾರಿಯನ್ನು ಮೆಚ್ಚಿದ್ದಾರೆ. ಅವರ ಹಾದಿಯಲ್ಲಿಯೇ ಚನ್ನಪಟ್ಟಣ ಅಭಿವೃದ್ಧಿಗೆ ಚಿಂತಿಸಿರುವುದಾಗಿ ತಿಳಿಸಿದ್ದಾರೆ ಎಂದ  ಯಾದವ್ ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಟ್ಟಂತಹ ಶಾಸಕ ಎಚ್.ಸಿ. ಬಾಲಕೃಷ್ಣ ಅವರ  ಕೈಬಲಪಡಿಸೋಣ ಎಂದರು.
ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿ.ಪಂ. ಸದಸ್ಯೆ ಹಂಸಕುಮಾರಿ, ತಾ.ಪಂ. ಅಧ್ಯಕ್ಷ ವೆಂಕಟೇಶ್, ಮಾಜಿ ಅಧ್ಯಕ್ಷ ಕಾಂತರಾಜು, ಸದಸ್ಯ ಜಿ.ಕೃಷ್ಣ,  ಅರುಂಧತಿ ಚಿಕ್ಕಣ್ಣ, ಗಂಗರಾಜು, ಚಕ್ರಭಾವಿ ಭೈರಪ್ಪ, ಎಲ್. ನಂಜಯ್ಯ, ಮಹಮದ್  ಇನಾಯಿತ್  ಉಲ್ಲಾ ಮಾತನಾಡಿದರು. ನೂರಾರು ಕಾರ್ಯಕರ್ತರು, ಸ್ತ್ರೀಶಕ್ತಿ ಸಂಘದ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement