ದೊಡ್ಡಬಳ್ಳಾಪುರಕ್ಕೆ ಪ್ರವೀಣ್ ತೊಗಾಡಿಯಾ ಖಾಸಗಿ ಭೇಟಿ
ದೊಡ್ಡಬಳ್ಳಾಪುರ: ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಯ್ ತೊಗಾಡಿಯಾ ಖಾಸಗಿ ಭೇಟಿಯ ನಿಮಿತ್ತ ಇಲ್ಲಿನ ತಪಸೀಹಳ್ಳಿಯ ಪುಷ್ಪಾಂಡಜಮುನಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಹೊಸಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಕ್ನೋದಿಂದ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದ ಅವರು ಆಶ್ರಮಕ್ಕೆ ಬಂದು ವಿಶ್ರಮಿಸಿ ನಂತರ ರಸ್ತೆ ಮಾರ್ಗವಾಗಿ ಹೊಸಪೇಟೆಗೆ ತೆರಳಿದರು.
ಆಶ್ರಮದ ಪರವಾಗಿ ಪೀಠಾಧಿಪತಿ ದಿವ್ಯಜ್ಞಾನಾನಂದ ಸ್ವಾಮೀಜಿ ತೊಗಾಡಿಯ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಸವರಾಜ್, ಹಿಂದೂಜಾಗರಣ ವೇದಿಕೆಯ ಅಮರನಾಥ್ ಉಪಸ್ಥಿತರಿದ್ದರು.
ಸನ್ಮಾನ: ಆಶ್ರಮದಿಂದ ನಿರ್ಗಮಿಸುವ ಮುನ್ನ ತೊಗಟವೀರ ಕ್ಷತ್ರಿಯ ಸಮಾಜದ ಪರವಾಗಿ ಬಿಬಿಎಂಪಿ ಸದಸ್ಯ ಹರೀಶ್, ದೊಡ್ಡಬಳ್ಳಾಪುರ ನಾಗರಿಕರ ಪರವಾಗಿ ರೇಷ್ಮೆ ಮಾರಾಟ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸನ್ಮಾನಿಸಿದರು. ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಂಜುನಾಥಸ್ವಾಮಿ, ಭಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹಾಜರಿದ್ದರು. ದೊಡ್ಡಬಳ್ಳಾಪುರ ಡಿವೈಎಸ್ಪಿ ಶ್ರೀಧರ್ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿತ್ತು.