ವಿದೇಶಿ ವ್ಯಾಮೋಹ ಬಿಡಿ, ಸ್ವದೇಶಿ ಚಿಂತಕರಾಗಿ...
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ.5
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಕ್ತಿತ್ವ ವಿಕಸನ ಶಿಬಿರ-ಸ್ವದೇಶ್ ಇಲ್ಲಿನ ಸ್ಕೌಟ್ ಮತ್ತು ಗೈಡ್ ತರಬೇತಿ ಕೇಂದ್ರದ ಬೆಸೆಂಟ್ ಪಾರ್ಕ್‌ನಲ್ಲಿ ಶುಕ್ರವಾರ ಆರಂಭವಾಯಿತು.
ತಪಸೀಹಳ್ಳಿಯ ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗೆ ದೊರೆಯಬಹುದಾದ ಎಲ್ಲಾ ಉತ್ತಮ ಮೂಲಗಳಿಂದ ಒಳಿತನ್ನು ಪಡೆಯಬೇಕು. ಸಗಣಿ ದುರ್ಗಂಧ ಬೀರಿದರೂ ಭೂಮಿಯಲ್ಲಿ ಬೆರೆತು ಗಿಡ-ಮರಗಳಿಗೆ ಸಂಜೀವಿನಿಯಾಗಿ ಪುಷ್ಪಗಳಿಗೆ ಸುವಾಸನೆ ರವಾನಿಸುತ್ತದೆ. ಅದೇ ರೀತಿ ನಾವು ದೇಶದ ಏಳಿಗೆಗೆ ಸಾಧ್ಯವಾದಷ್ಟೂ ಮಟ್ಟಿಗೆ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸ್ವದೇಶ್ ಕಾರ್ಯಕ್ರಮದ ಆಶಯದಂತೆ ನಾವು ಸಂಪೂರ್ಣ ಸ್ವದೇಶಿ ಕಲ್ಪನೆಯನ್ನು ಹೊಂದಬೇಕು. ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನ ನಡೆಸಬೇಕು. ವಿದೇಶಿ ವಸ್ತುಗಳ ವ್ಯಾಮೋಹ ತೊರೆದು ಸ್ವದೇಶಿ ವಸ್ತುಗಳನ್ನೇ ಹೆಚ್ಚಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಿದರು. ಅಣ್ಣಾಹಜಾರೆ, ಬಾಬಾ ರಾಮ್‌ದೇವ್ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಗಣನೀಯ ಪಾತ್ರ ವಹಿಸಿದ್ದ ವಿದ್ಯಾರ್ಥಿ ಪರಿಷತ್ ಕಾರ್ಯವನ್ನು ಶ್ಲಾಘಿಸಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪರಿಷತ್‌ನ ಬೆಂಗಳೂರು ಮಹಾನಗರ ಅಧ್ಯಕ್ಷ ಡಾ.ಶ್ಯಾಂಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಘುಪೂಜಾರ್, ಸ್ವದೇಶ್ ಸಂಚಾಲಕ ಮಹೇಶ್, ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷ್, ತಾಲೂಕು ಸಂಚಾಲಕ ನವೀನ್ ಮತ್ತಿತರರು ಭಾಗವಹಿಸಿದ್ದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.